

ಬೆಂಗಳೂರು: ‘ಕೆಜಿಎಫ್’, ‘ಪೈಲ್ವಾನ್’, ‘ಕಬ್ಜ’, ‘ವಿಕ್ರಾಂತ್ ರೋಣ’, ‘777 ಚಾರ್ಲಿ’... ಹೀಗೆ ಕಳೆದ ಕೆಲವು ವರ್ಷಗಳಲ್ಲಿ, ಹಲವು ಪ್ಯಾನ್ ಇಂಡಿಯಾ ಚಿತ್ರಗಳು ಬಂದಿವೆ. ಈ ಪಟ್ಟಿಗೆ ಕನ್ನಡದಿಂದ ಇನ್ನೊಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ಅದೇ ‘ತೋತಾಪುರಿ’.
ಜಗ್ಗೇಶ್ ಅಭಿನಯದ ‘ತೋತಾಪುರಿ’ ಚಿತ್ರವು ಮೊದಲು ಒಂದು ಚಿತ್ರ ಎಂದು ಪ್ರಾರಂಭವಾಗಿದ್ದು, ಕೊನೆಗೆ ಎರಡು ಭಾಗಗಳಾಯ್ತು. ಕನ್ನಡ ಅಂತ ಶುರುವಾಗಿದ್ದು, ಈಗ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಡಿಸೆಂಬರ್ನಲ್ಲಿ ಚಿತ್ರದ ಮೊದಲ ಭಾಗ ಐದೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಚಿತ್ರ ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವ ಕುರಿತು ಮಾತನಾಡುವ ನಿರ್ವಪಕ ಸುರೇಶ್, ‘ಇದೊಂದು ಯೂನಿವರ್ಸಲ್ ಕಥೆ ಇರುವ ಚಿತ್ರ. ಎಲ್ಲ ಭಾಷೆಗಳಿಗೂ ಸಲ್ಲುತ್ತದೆ. ಇದುವರೆಗೂ ಕನ್ನಡದ ಹಲವು ಕಮರ್ಷಿಯಲ್ ಚಿತ್ರಗಳು ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿವೆ. ಇದೇ ಮೊದಲ ಬಾರಿಗೆ ಫ್ಯಾಮಿಲಿ ಡ್ರಾಮಾ ಚಿತ್ರವೊಂದು ಇಷ್ಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಬರೀ ಒಂದು ಚಿತ್ರ ಮಾತ್ರವಲ್ಲ, ಭಾಗ 1 ಮತ್ತು 2 ಚಿತ್ರಗಳು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿವೆ’ ಎನ್ನುತ್ತಾರೆ.
‘ತೋತಾಪುರಿ’ ಚಿತ್ರವನ್ನು ‘ಸಿದ್ಲಿಂಗು’ ಮತ್ತು ‘ನೀರ್ದೋಸೆ’ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಸಹ ಅವರದ್ದೇ. ಜಗ್ಗೇಶ್ ಜತೆಗೆ ಅದಿತಿ ಪ್ರಭುದೇವ, ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ ಮುಂತಾದವರು ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಈ ಚಿತ್ರಕ್ಕಿದೆ.