ಓಟಿಟಿಯಲ್ಲಿ ಬಿಡುಗಡೆಯಾಗಲಿದೆಯಂತೆ 'ಪಲ್ಲವಿ ಟಾಕೀಸ್​' ...

Pallavi Talkies - Final
Published on

ಬೆಂಗಳೂರು: ಕಳೆದ ಒಂದೂವರೆ ತಿಂಗಳುಗಳಿಂದ ಲಾಕ್​ಡೌನ್​ನಿಂದಾಗಿ ರಾಜ್ಯದ್ಯಂತ ಚಿತ್ರಮಂದಿರಗಳು ಬಂದ್​ ಆಗಿವೆ. ಯಾವಾಗ ಪ್ರಾರಂಭವಾಗುತ್ತವೆ ಎಂಬುದು ಯಾರಿಗೂ ಗೊತ್ತಾಗದಂತ ಪರಿಸ್ಥಿತಿ ಇದೆ. ಹೀಗಿರುವಾಗ, ಹಲವರು ತಮ್ಮ ಚಿತ್ರಗಳನ್ನು ಓಟಿಟಿಯಲ್ಲಿ ಯಾಕೆ ಬಿಡುಗಡೆ ಮಾಡಬಾರದು ಎಂದು ಯೋಚಿಸುತ್ತಿದ್ದಾರೆ. ಅಂತವರ ಮಧ್ಯೆ, ತಿಲಕ್​ ಅಭಿನಯದ 'ಎಚ್​/34 ಪಲ್ಲವಿ ಟಾಕೀಸ್​' ಸಹ ಒಂದು.

'ಎಚ್​/34 ಪಲ್ಲವಿ ಟಾಕೀಸ್​' ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಲಾಕ್​ಡೌನ್​ಗೂ ಮುನ್ನವೇ ಮುಗಿದಿತ್ತು. ಈ ಮಧ್ಯೆ, ಚಿತ್ರದ ಪೋಸ್ಟ್​-ಪ್ರೊಡಕ್ಷನ್​ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡದವರು, ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದ್ದಾರಂತೆ. ಈ ಕುರಿತು ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ಯಾವ ವೇದಿಕೆಯಲ್ಲಿ ಮತ್ತು ಯಾವಾಗ ಚಿತ್ರ ಬಿಡುಗಡೆಯಾಗಲಿದೆ ಎಂದು ಗೊತ್ತಾಗಲಿದೆ.

ಈ ಮಧ್ಯೆ, ಇತ್ತೀಚೆಗೆ ಚಿತ್ರದ 'ಬರೆವೆ ಬರೆವೆ ಒಲವ ಕವನ ...' ಎಂಬ ಹಾಡು ಯೂಟ್ಯೂಬ್​ನ ಆನಂದ್ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದೆ. ಶ್ರೀನಿವಾಸ್ ಚಿಕ್ಕಣ್ಣ (ಸೀನಿ) ಬರೆದಿರುವ ಈ ಹಾಡನ್ನು ಬಾಲಿವುಡ್‌ನ ಜನಪ್ರಿಯ ಗಾಯಕ ಅಂಕಿತ್ ತಿವಾರಿ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಮಂಜುನಾಥ್ ಕೆ ಹಾಗೂ ರವಿಕಿರಣ್ ಎಂ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಶ್ರೀನಿವಾಸ್ ಚಿಕ್ಕಣ್ಣ (ಸೀನಿ) ನಿರ್ದೇಶಿಸಿದ್ದಾರೆ. ಈ ಹಿಂದೆ '6ನೇ ಮೈಲಿ' ಚಿತ್ರವನ್ನು ನಿರ್ದೇಶಿಸಿದ್ದ, ಶ್ರೀನಿವಾಸ್ ಚಿಕ್ಕಣ್ಣ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಹಾರಾರ್ ಹಾಗೂ ಸಸ್ಪೆನ್ಸ್ ಅಂಶಗಳುಳ್ಳ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಮನೋಹರ್ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವ್ ಸಂಕಲನ ಇರುವ ಈ ಚಿತ್ರದಲ್ಲಿ ತಿಲಕ್​ಗೆ ನಾಯಕಿಯಾಗಿ ಯಜ್ಞಾ ಶೆಟ್ಟಿ ಅಭಿನಯಿಸಿದ್ದಾರೆ. ಸಚೇಂದ್ರ ಪ್ರಸಾದ್, ಅವಿನಾಶ್, ಸುಧಾ ಬೆಳವಾಡಿ, ಅಚ್ಯುತ್​ ಕುಮಾರ್, ಪದ್ಮಜಾ ರಾವ್, ಕುರಿ ಪ್ರತಾಪ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net