

ಬೆಂಗಳೂರು: ಕರೊನಾ ನಿಯಂತ್ರಣಕ್ಕಾಗಿ ಹೇರಿರುವ ಲಾಕ್ಡೌನ್ನಿಂದ ವಿವಿಧ ಕ್ಷೇತ್ರಗಳ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದು, ಆ ಪೈಕಿ ಸಿನಿಮಾ ತಂತ್ರಜ್ಞರು ಕೂಡ ಇದ್ದಾರೆ. ಈಗಾಗಲೇ ಸಿನಿಮಾ ಕ್ಷೇತ್ರದ ಹಲವಾರು ಮಂದಿ ಸಂಕಷ್ಟದಲ್ಲಿರುವ ಸಹ ಕಲಾವಿದರಿಗೆ, ಸಿನಿಮಾ ತಂತ್ರಜ್ಞರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೂ ನೆರವಾಗುತ್ತಿದ್ದಾರೆ. ಅಂಥವರ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ ನಟಿ ಶರ್ಮಿಳಾ ಮಾಂಡ್ರೆ.
ನಟರಾದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನೀನಾಸಂ ಸತೀಶ್, ಸಂಚಾರಿ ವಿಜಯ್, ಭುವನ್, ಹರ್ಷಿಕಾ ಪೂಣಚ್ಚ, ರಾಗಿಣಿ, ನೀತು ಶೆಟ್ಟಿ ಮುಂತಾದವರು ಈಗಾಗಲೇ ತಮ್ಮದೇ ಆದ ರೀತಿಯಲ್ಲಿ ಕೋವಿಡ್ ಹಾಗೂ ಲಾಕ್ಡೌನ್ ಸಂತ್ರಸ್ತರಿಗೆ ಸಹಾಯ ಮಾಡುತ್ತಲೇ ಇದ್ದಾರೆ.
ಈಗ ನಟಿ ಹಾಗೂ ನಿರ್ಮಾಪಕಿಯೂ ಆಗಿರುವ ಶರ್ಮಿಳಾ ಮಾಂಡ್ರೆ ಕೂಡ ಸಹಾಯಕ್ಕೆ ಮುಂದಾಗಿದ್ದು, ಸಿನಿಮಾ ತಂತ್ರಜ್ಞರಿಗೆ ನೆರವು ಒದಗಿಸಿದ್ದಾರೆ. ಇಂದು ನಾಗರಬಾವಿಯಲ್ಲಿ ಅವರು ಸಿನಿಮಾ ಕ್ಷೇತ್ರದ 150 ತಂತ್ರಜ್ಞರಿಗೆ ದಿನಸಿ ಕಿಟ್ ವಿತರಿಸಿದ್ದಲ್ಲದೆ, ನಾಗರಬಾವಿ ಸುತ್ತಮುತ್ತಲ ಸಂಕಷ್ಟದಲ್ಲಿರು ಸಾರ್ವಜನಿಕರಿಗೆ 100 ಆಹಾರದ ಪೊಟ್ಟಣಗಳನ್ನೂ ವಿತರಿಸಿದರು.