

ಆ ಕಡೆ ‘ದುನಿಯಾ’ ಸೂರಿ, ‘ಕಾಗೆ ಬಂಗಾರ’ ಎಂಬ ಚಿತ್ರವನ್ನು ಮಾಡುವುದಾಗಿ ಹೇಳುತ್ತಲೇ ಇದ್ದಾರೆ. ಇನ್ನೊಂದು ಕಡೆ ಅದೇ ಹೆಸರಿನ ಚಿತ್ರವೊಂದು ಸೆಟ್ಟೇರುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿದೆ.
‘ಕೆಂಡ ಸಂಪಿಗೆ’ ಚಿತ್ರದ ಮುಂದುವರೆದ ಭಾಗವಾಗಿ ‘ಕಾಗೆ ಬಂಗಾರ’ ಎಂಬ ಇನ್ನೊಂದು ಚಿತ್ರ ಮಾಡುವುದಾಗಿ ಸೂರಿ ಐದು ವರ್ಷಗಳ ಹಿಂದೆ ಘೋಷಿಸಿದ್ದರು. ಕೆಲವು ಸಮಯದ ನಂತರ, ‘ಕಾಗೆ ಬಂಗಾರ’ದ ಕಥೆ ಅಪ್ರಸ್ತುತ ಎಂದನಿಸುತ್ತಿರುವುದರಿಂದ, ಆ ಚಿತ್ರ ಮಾಡುತ್ತಿಲ್ಲ ಎಂದು ಹೇಳಿದ್ದರು. ಇನ್ನು ಆ ಚಿತ್ರ ಸೆಟ್ಟೇರುವುದಿಲ್ಲ ಎನ್ನುವಾಗಲೇ, ‘ಪಾಪ್ಕಾರ್ನ್ ಮಂಕಿ ಟೈಗರ್’ನಲ್ಲಿ ‘ಕಾಗೆ ಬಂಗಾರ’ ಹೆಸರಿನ ಚಿತ್ರ ಮಾಡುವ ಸುಳಿವು ನೀಡಿದ್ದರು. ಸೂರಿ ಅವರ ಮುಂದಿನ ಚಿತ್ರ ‘ಕಾಗೆ ಬಂಗಾರ’ ಎಂದು ಎಲ್ಲರೂ ಕಾಯುತ್ತಿರುವಾಗಲೇ, ಅದೇ ಹೆಸರಿನ ಇನ್ನೊಂದು ಚಿತ್ರ ಇದೀಗ ಸುದ್ದಿಯಾಗುತ್ತಿದೆ.
ದಿನೇಶ್ ಗೌಡ ಎನ್ನುವವರು ನಿರ್ದೇಶಿಸುತ್ತಿರುವ ‘ಕಾಗೆ ಬಂಗಾರ’ ಚಿತ್ರದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಸಾಕಷ್ಟು ಚರ್ಚೆಯಾ ಗುತ್ತಿದೆ. ಹಾಗಾದರೆ, ‘ಕಾಗೆ ಬಂಗಾರ’ ಎಂಬ ಟೈಟಲ್ ಸೂರಿ ಅವರ ಕೈತಪ್ಪಿತೇ ಅಥವಾ ಆ ಹೆಸರಿನ ಚಿತ್ರವನ್ನು ಸೂರಿ ಕೈಬಿಟ್ಟಿದ್ದಾರೆಯೇ ಎಂಬ ಪ್ರಶ್ನೆಗಳು ಸಾಕಷ್ಟು ಕೇಳಿ ಬರುತ್ತಿವೆ. ಇದಕ್ಕೆ ಸೂರಿ ಏನನ್ನುತ್ತಾರೋ ಎಂಬ ಕುತೂಹಲ ಎಲ್ಲರಿಗೂ ಇದೆ.