ಸಿದ್ದು ಮೂಲಿಮನಿ ‘ಓಮಿನಿ’ ಟ್ರೇಲರ್ ಬಿಡುಗಡೆ! ಶುಭಾಶಯ ಕೋರಿದ ಗೃಹಸಚಿವರು

WhatsApp Image 2022-07-17 at 2.39.14 PM
Published on

ಓಮಿನಿ ಕಾರ್ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಓಮಿನಿ ಅಂದರೆ ಲ್ಯಾಟಿನ್ ಭಾಷೆಯಲ್ಲಿ ‘ಎಲ್ಲಾ’ ಎಂದರ್ಥ. ವಿಶೇಷ ಅಂದರೆ ಮಂಜು ಹೆದ್ದೂರ್ ನಿರ್ದೇಶನದ ‘ಓಮಿನಿ’ ಚಿತ್ರದಲ್ಲಿ ಕಾರ್ ಮತ್ತು ಎಲ್ಲಾ ಎರಡೂ ವಿಷಯಗಳೂ ಪ್ರಮುಖ ಪಾತ್ರ ವಹಿಸಿವೆ. ಇತ್ತೀಚೆಗಷ್ಟೇ ಗೃಹಸಚಿವರಾದ ಅರಗ ಜ್ಞಾನೇಂದ್ರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ತೀರ್ಥಹಳ್ಳಿ ಸುಂದರ ಊರು. ಅಲ್ಲಿನ ಗಾಳಿ, ನೀರಿನಲ್ಲಿ ಅದ್ಭುತ ಶಕ್ತಿಯಿದೆ ಅನ್ನಿಸುತ್ತದೆ. ರಾಷ್ಟ್ರಕವಿ ಕುವೆಂಪು, ಮಾಜಿ ಸಿಎಂ ಕಡಿದಾಳ್ ಮಂಜಪ್ಪ ಸೇರಿದಂತೆ ಅನೇಕ ಗಣ್ಯರು ನಮ್ಮ ತಾಲ್ಲೂಕಿನವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ‘ಓಮಿನಿ’ ಚಿತ್ರದ ನಿರ್ದೇಶಕ ಮಂಜು ಕೂಡ ನಮ್ಮೂರಿನವರೇ. ನಾಯಕಿ ಅಶ್ವಿನಿ ಕೂಡ ನಮ್ಮೂರಿನವರೇ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು.


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಬಾಮ ಹರೀಶ್ ಕೂಡ ಚಿತ್ರತಂಡಕ್ಕೆ ಶುಭಹಾರೈಸಿದರು. ಬಳಿಕ ಮಾತನಾಡಿದ ನಿರ್ದೇಶಕ ಮಂಜು ಹೆದ್ದೂರ್, ‘ಆಗಸ್ಟ್ 19ರಂದು ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ನಾನು ನಿರ್ದೇಶನದೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ಇದೊಂದು ವಿಭಿನ್ನ ಕಥೆಯ ಚಿತ್ರ. ಸಿನಿಮಾವೊಂದರಲ್ಲಿ ಸಿನಿಮಾ ತೋರಿಸುವ ಪ್ರಯತ್ನ ಮಾಡಿದ್ದೇವೆ. ಲವ್, ಸಸ್ಪೆನ್ಸ್, ಹಾರರ್ ಎಲ್ಲ ಅಂಶಗಳೂ ನಮ್ಮ ಚಿತ್ರದಲ್ಲಿವೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲೇ ಹೆಚ್ಚು ಚಿತ್ರೀಕರಣ ಮಾಡಿದ್ದೇವೆ. ದಾವಣಗೆರೆಯ ಅತಿ ದೊಡ್ಡ ಗ್ಲಾಸ್ ಹೌಸ್‌ನಲ್ಲಿ ಶೂಟಿಂಗ್ ಮಾಡಿದ್ದೇವೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಹಲವು ವರ್ಷಗಳ ಹೋರಾಟ ಇವತ್ತು ಈ ಹಂತಕ್ಕೆ ಬಂದಿದೆ. ಮುಂದೆ ಇನ್ನೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಬೇಕು ಅಂತಂದುಕೊಂಡಿದ್ದೇನೆ’ ಎಂದು ‘ಓಮಿನಿ’ ಬಗ್ಗೆ ಮಾಹಿತಿ ಹಂಚಿಕೊಂಡರು.


ಬಳಿಕ ಮಾತನಾಡಿದ ಚಿತ್ರದ ನಾಯಕ ಸಿದ್ದು ಮೂಲಿಮನಿ, ‘ಇದು ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ನೋಡಿ, ಹರಸಿ’ ಎಂದರು. ಹಾಗೆಯೇ ನಾಯಕಿ ಅಶ್ವಿನಿ ನಾಲ್ಕೈದು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ‘ಪ್ರೇಮ ಪಲ್ಲಕ್ಕಿ’, ‘ಆಕ್ಟೋಪಸ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಅವರಿಗೆ ‘ಓಮಿನಿ’ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಸಿನಿಮಾ. ‘ಹಲವು ವರ್ಷಗಳ ನಂತರ ಮತ್ತೆ ಕನ್ನಡದಲ್ಲಿ ನಟಿಸಿರುವ ಖುಷಿಯಿದೆ. ಒಳ್ಳೆ ಪಾತ್ರ ನೀಡಿದ್ದಾರೆ. ನಾನೂ ಮಲೆನಾಡ ಹುಡುಗಿ. ಅದೇ ಊರಿನ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ಅಶ್ವಿನಿ ಚಂದ್ರಶೇಖರ್. ಗೀತರಚನೆಕಾರ ಪ್ರಮೋದ್ ಅವರು ‘ಪ್ರಾಬ್ಲಂ... ’ ಎಂಬ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.


ಶ್ರೀ ಬೆಳ್ಳುಡಿ ಫಿಲಂಸ್ ಹಾಗೂ ಎಸ್‌ಆರ್ ಗ್ರೂಪ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಿಸಲಾಗಿದೆ. ಮಂಜು ಹೆದ್ದೂರ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ ನಿರ್ದೇಶನ ಹಾಗೂ ಎಂ.ಬಿ. ಹಳ್ಳಿಕಟ್ಟಿ ಛಾಯಾಗ್ರಹಣವಿದೆ. ಸಿದ್ದು ಮೂಲಿಮನಿ, ಅಶ್ವಿನಿ ಚಂದ್ರಶೇಖರ್ ನಾಯಕ, ನಾಯಕಿಯಾಗಿದ್ದು, ಪೂಜಾ ಜನಾರ್ಧನ್, ಭರತ್ ಬೋಪಣ್ಣ, ಆಕಾಂಕ್ಷಾ ಪಟಮಕ್ಕಿ, ಮೋಹನ್ ಜುನೇಜಾ, ಪ್ರಕಾಶ್ ತುಮ್ಮಿನಾಡು, ಮನಸ್ವಿತ್ ಪ್ರಮುಖ ತಾರಾಬಳಗದಲ್ಲಿದ್ದಾರೆ. ಇದೇ ಆಗಸ್ಟ್ 18ರಂದು ‘ಓಮಿನಿ’ ಸಂಚಾರ ಥಿಯೇಟರ್‌ಗಳಲ್ಲಿ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net