

ಮೇ 19ಕ್ಕೆ ಶಿವರಾಜಕುಮಾರ್ ಅಭಿನಯದ ‘ಓಂ’ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿವೆ. ಈ ಸಂಭ್ರಮವನ್ನು ಸ್ಯಾಂಡಲ್‌ವುಡ್ ಮಂದಿ ಮತ್ತು ಶಿವರಾಜಕುಮಾರ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಚರಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರವು ಸಿಲ್ವರ್ ಜ್ಯೂಬಿಲಿ ಬಾರಿಸಿದ ಸಂಭ್ರಮದಲ್ಲಿ ಶಿವರಾಜಕುಮಾರ್ ಮತ್ತು ಉಪೇಂದ್ರ ಇಬ್ಬರೂ ಫೇಸ್‌ಬುಕ್ ಲೈವ್ ಬಂದಿದ್ದರು.
ಇನ್ನು ‘ಓಂ’ ಚಿತ್ರದ ಹೆಸರು ಬಂದಾಗಲೆಲ್ಲಾ, ಅದರ ಮುಂದುವರೆದ ಭಾಗ ಅಥವಾ ಅದೇ ತರಹದ ಇನ್ನೊಂದು ಚಿತ್ರವನ್ನು ಯಾವಾಗ ಮಾಡುತ್ತೀರಿ ಎಂದು ಶಿವರಾಜಕುಮಾರ್ ಮತ್ತು ಉಪೇಂದ್ರ ಅವರ ಅಭಿಮಾನಿಗಳು ಹಲವು ವರ್ಷಗಳಿಂದ ಕೇಳುತ್ತಲೇ ಬಂದಿದ್ದಾರೆ. ಅದಕ್ಕೆ ಸರಿಯಾಗಿ, ಕಾಲ ಕೂಡಿ ಬಂದಾಗ ನೋಡೋಣ ಎಂದು ಇಬ್ಬರೂ ಉತ್ತರಿಸುತ್ತಲೇ ಇದ್ದಾರೆ. ಮೊನ್ನೆ ಸಿಲ್ವರ್ ಜ್ಯೂಬಿಲಿ ಸಂದರ್ಭದಲ್ಲಿ, ಈ ಪ್ರಶ್ನೆ ಹಲವು ಬಾರಿ ಪ್ರಸ್ತಾಪವಾಗಿತ್ತು.
ಎಲ್ಲಾ ಸರಿ, ನಿಜಕ್ಕೂ ‘ಓಂ 2’ ಅಥವಾ ರೌಡಿಸಂ ಹಿನ್ನೆಲೆಯ ಇನ್ನೊಂದು ಕಥೆಯನ್ನು ಶಿವರಾಜಕುಮಾರ್ ಅವರಿಗೆ ಉಪೇಂದ್ರ ನಿರ್ದೇಶಿಸುತ್ತಾರಾ ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ಅಂತಹ ಮಾಸ್ಟರ್‌ಪೀಸ್‌ಗಳನ್ನು ಮುಟ್ಟುವುದಕ್ಕೆ ಹೋಗಬಾರದು ಎಂಬ ಉತ್ತರ ಉಪೇಂದ್ರ ಅವರಿಂದ ಬರುತ್ತದೆ.
ಈ ಕುರಿತು ‘ವಿಜಯವಾಣಿ’ಯ ಜತೆಗೆ ಇತ್ತೀಚೆಗೆ ಮಾತನಾಡಿದ ಉಪೇಂದ್ರ, ‘ಓಂ’ ಬೇರೆಯದೇ ತರಹದ ಸಿನಿಮಾ. ಅದೆಲ್ಲಾ ಒಂದೇ ಸಾರಿ ಆಗೋದು. ಅದನ್ನೆಲ್ಲಾ ಮುಟ್ಟೋಕೆ ಹೋಗಬಾರದು. ಬೇರೆ ಸಾವಿರ ಸಿನಿಮಾಗಳನ್ನು ಮಾಡಬಹುದು. ಆದರೆ, ಅದೇ ತರಹ ಇನ್ನೊಂದು ಸೃಷ್ಟಿಸುವುದು ಕಷ್ಟ’ ಎನ್ನುತ್ತಾರೆ.