ಓಂ ಸಿನಿಮಾದಿಂದ ಸಾಮಾನ್ಯ ಹರೀಶ್, ‘ರಾಯ್​‘ ಆಗಿ ಬದಲಾಗಿದ್ದೇ ರೋಚಕ!

Om (2)
Published on

ಬೆಂಗಳೂರು: 1995ರಲ್ಲಿ ತೆರೆ ಕಂಡ ಉಪೇಂದ್ರ ನಿರ್ದೇಶನದ ಶಿವರಾಜಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಓಂ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದವರು ಹರೀಶ್ ಆಚಾರ್ಯ. ‘ಓಂ’ನಲ್ಲಿನ ‘ಡಾನ್ ರಾಯ್’ ಪಾತ್ರದ ಮೂಲಕ ಹರೀಶ್ ರಾಯ್ ಎಂದೇ ಗುರುತಿಸಿಕೊಂಡ ಇವರು, ಸದ್ಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಇದೇ ಹರೀಶ್​ ರಾಯ್​ ಓಂ ಸಿನಿಮಾ 25ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ನಿಮಿತ್ತ ಆ ಚಿತ್ರದ ಜತೆಗಿನ ನಂಟನ್ನು ನೆನಪು ಮಾಡಿಕೊಂಡಿದ್ದಾರೆ. ಚಂದನವನದಲ್ಲಿ ಸ್ಥಾನಕೊಟ್ಟ ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

‘ಶಿವಣ್ಣ ಅವರ ಸಿನಿಮಾಗಳನ್ನು ಕ್ಯೂನಲ್ಲಿ ನಿಂತು ನೋಡುತ್ತಿದ್ದೆವು. ಅಭಿಮಾನದ ಜತೆಗೆ ಭಯವೂ ಇತ್ತು. ಸಡನ್​ ಆಗಿ ಅವರ ಸಿನಿಮಾದಲ್ಲಿ ನಟಿಸುವ ಅವಕಾಶವೂ ನನಗೆ ಸಿಕ್ಕಿತ್ತು. ಭಯದಲ್ಲೇ ಶೂಟಿಂಗ್​ನಲ್ಲಿ ಭಾಗವಹಿಸಿದ್ದೆ. ನಮ್ಮಲ್ಲಿನ ಭಯವನ್ನು ಗಮನಿಸಿದ ಶಿವಣ್ಣ, ನನ್ನ ಬಳಿ ಬಂದು, ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದರು. ಆವತ್ತು ಅವರು ಹೇಳಿದ ಒಂದು ಮಾತು ಇಂದಿಗೂ ನನಗೆ ನೆನಪಿದೆ’ ಎನ್ನುವ ಹರೀಶ್​ ಆ ಮಾತನ್ನು ಹೀಗೆ ಹೇಳುತ್ತಾರೆ.

‘ನಾನು ‘ಓಂ’ ಚಿತ್ರದಲ್ಲಿ ‘ಡಾನ್ ರಾಯ್’ ಪಾತ್ರ ಮಾಡಿದೆ. ಅಲ್ಲಿಯವರೆಗೆ ಹರೀಶ್ ಆಗಿದ್ದ ನಾನು, ಶಿವಣ್ಣ ಅವರ ಮಾತು ಕೇಳಿ ಹರೀಶ್​ ಜತೆ ರಾಯ್​ ಸೇರಿಸಿಕೊಂಡೆ. ರಾಯ್​ ಸೇರಿಸಿಕೊಂಡು ನೋಡು.. ನಿನ್ನ ಕರಿಯರೇ ಬದಲಾಗುತ್ತದೆ ಎಂದಿದ್ದರು. ಅವರ ಮಾತಿನಂತೆ ಅದೇ ಹೆಸರಿನಿಂದ ನಾನು ಗುರುತಿಸಿಕೊಂಡೆ. ಮುಂದೆ ನಡೆದಿದ್ದೆಲ್ಲವು ಇತಿಹಾಸ. ಈ ಸಿನಿಮಾ ಶೂಟಿಂಗ್​ ಮುಗಿದ ಬಳಿಕ ಉಡುಪಿಗೆ ಹೋಗುವ ಪ್ಲಾನ್​ನಲ್ಲಿದ್ದೆ. ಆಗ ಮತ್ತೆ ಶಿವಣ್ಣ ಜತೆ ಸಮರ ಸಿನಿಮಾದ ಅವಕಾಶ ಸಿಕ್ಕಿತ್ತು. ಇಂಡಸ್ಟ್ರಿಯಲ್ಲಿ ನನ್ನ ಗಾಡ್​ಫಾದರ್​ ಶಿವಣ್ಣ ಎಂದೇ ನಾನು ಹೇಳುತ್ತೇನೆ’ಎನ್ನುತ್ತಾರೆ ಹರೀಶ್​ ರಾಯ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net