1 + 1 = 3 ಎಂದ ನಟಿ ಅಮಲಾ ಪೌಲ್​! ಅಭಿಮಾನಿಗಳಿಂದ ಹರಿದುಬಂತು ಅಭಿನಂದನೆಗಳ ಮಹಾಪೂರ

Amala Pual
Published on

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್​ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್​ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್​ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್​ನ “ಮೈನಾ” ಚಿತ್ರ​ದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್​ ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್​ಗಳ ಜೊತೆ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಮಲಾ, ಪ್ರತಿಯೊಂದು ವಿಚಾರವನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ಅಮಲಾ ಒಂದು ರೀತಿಯಲ್ಲಿ ತೆರೆದ ಪುಸ್ತಕವಿದ್ದಂತೆ. ಅವರ ಬಗ್ಗೆ ಬಹುತೇಕ ಸಂಗತಿಗಳು ಎಲ್ಲರಿಗೂ ತಿಳಿದಿದೆ. 2014ರಲ್ಲಿ ಅಮಲಾ, ತಮಿಳು ನಿರ್ದೇಶಕ ಎ.ಎಲ್. ವಿಜಯ್ ಮದುವೆಯಾಗಿದ್ದರು. ಆದರೆ, ಮೂರು ವರ್ಷಗಳಲ್ಲೇ ಇಬ್ಬರ ನಡುವೆ ಬಿರುಕುಂಟಾಗಿ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 2019ರಲ್ಲಿ ಚೆನ್ನೈ ಮೂಲದ ವೈದ್ಯೆ ಡಾ. ಐಶ್ವರ್ಯಾರನ್ನು ವರಿಸಿದ ವಿಜಯ್, ಹೊಸ ಜೀವನ ಪ್ರಾರಂಭಿಸಿದರು. ಈಗ ಈ ಜೋಡಿಗೆ ಮೂರು ವರ್ಷದ ಮುದ್ದಾದ ಗಂಡು ಮಗುವಿದೆ.

ವಿಜಯ್ ಅವರಿಂದ ವಿಚ್ಛೇದನ ಪಡೆದ ಬಳಿಕ ಅಮಲಾ ಮತ್ತೆ ಸಿನಿಮಾಗಳಲ್ಲಿ ಬಿಜಿಯಾದರು. ಇದರ ನಡುವೆ ಕಳೆದ ಅಕ್ಟೋಬರ್​ 26ರಂದು 32ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಮಲಾ, ಅದೇ ದಿನ ತಮ್ಮ ಬಾಯ್​ಫ್ರೆಂಡ್ ಜಗತ್​ ದೇಸಾಯಿ ಅವರನ್ನು​ ಪರಿಚಯಿಸುವ ಮೂಲಕ ತಾವು ಮತ್ತೊಮ್ಮೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವುದನ್ನು ಅಧಿಕೃತವಾಗಿ ಬಹಿರಂಗಪಡಿಸಿದರು. ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಕೆಲಸ ಮಾಡುವ ಜಗತ್​ ದೇಸಾಯಿ ಜತೆ ಕಳೆದ ನವೆಂಬರ್​ 5ರಂದು ಹಸೆಮಣೆ ಏರಿದರು.

ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವ ಅಮಲಾ, ಗೆಳೆಯ ಜಗತ್ ದೇಸಾಯಿ ಜೊತೆ ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸುತ್ತಿದ್ದಾರೆ. ಇದೀಗ ಅಭಿಮಾನಿಗಳಿಗೆ ಅಮಲಾ, ಗುಡ್​ ನ್ಯೂಸ್​ ಒಂದನ್ನು ನೀಡಿದ್ದಾರೆ. ಅದೇನೆಂದರೆ ತಾನು ತಾಯಿಯಾಗುತ್ತಿರುವ ಖುಷಿಯನ್ನು ಇನ್​ಸ್ಟಾಗ್ರಾಂ ಮೂಲಕ ಅಮಲಾ ಹಂಚಿಕೊಂಡಿದ್ದಾರೆ. ಬೇಬಿ ಬಂಪ್​ ಫೋಟೋ ಶೇರ್​ ಮಾಡುವುದರ ಜತೆಗೆ 1+1 ನಿನ್ನೊಂದಿಗೆ 3 ಆಗಿದೆ ಎಂಬುದು ನನಗೀಗ ತಿಳಿದಿದೆ ಅಂತಾ ಅಮಲಾ ಬರೆದುಕೊಂಡಿದ್ದಾರೆ. ಈ ಮೂಲಕ ತಾಯಿಯಾಗುತ್ತಿರುವ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಅಮಲಾ ಗರ್ಭಿಣಿಯಾಗಿರುವ ಸುದ್ದಿ ತಿಳಿಯುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರ್ ಅವರ ಆಡಿಜೀವಿಥಂ ಸಿನಿಮಾದಲ್ಲಿ ಅಮಲಾ ನಾಯಕಿಯಾಗಿದ್ದು, ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net