

Actress Anjali : ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್' ಸಿನಿಮಾ ಇತ್ತೀಚೆಗೆ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಯಿತು. ರೋಬೋಟ್ ಸಿನಿಮಾ ಖ್ಯಾತಿಯ ಶಂಕರ್ ಅವರ ನಿರ್ದೇಶನ ಮತ್ತು ದಿಲ್ ರಾಜು ನಿರ್ಮಾಣದ ಈ ಸಿನಿಮಾದಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ನಟಿಸಿದ್ದು, ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು.
ಅಂಜಲಿ ಮತ್ತು ಕಿಯಾರಾ ಅಡ್ವಾಣಿ ನಾಯಕಿಯರಾಗಿ ನಟಿಸಿದ್ದರೆ. ಎಸ್.ಜೆ. ಸೂರ್ಯ, ಶ್ರೀಕಾಂತ್, ಸುನಿಲ್, ರಾಜೀವ್ ಕನಕಲಾ, ಜಯರಾಮ್... ಹೀಗೆ ಹಲವು ಕಲಾವಿದರು ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸಿದ್ದಾರೆ. ಶಂಕರ್ ನಿರ್ದೇಶನದ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿತ್ತು. ಆದರೆ, 'ಗೇಮ್ ಚೇಂಜರ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೇರೆ ನಟರ ಕೆಲವು ಅಭಿಮಾನಿಗಳು ಗೇಮ್ ಚೇಂಜರ್ ಸಿನಿಮಾವನ್ನು ಗುರಿಯಾಗಿಸಿಕೊಂಡು ನೆಗೆಟಿವ್ ಪ್ರಚಾರ ಮಾಡಿದರು. ಇದು ಕೂಡ ಸಿನಿಮಾ ಮೇಲೆ ಪರಿಣಾಮ ಬೀರಿತು. ಆದ್ದರಿಂದ ಚಿತ್ರವು ನಿರೀಕ್ಷಿತ ಯಶಸ್ಸನ್ನು ಗಳಿಸಲಿಲ್ಲ. ಶಂಕರ್ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಉತ್ತಮ ಸಂದೇಶವುಳ್ಳ ಸಿನಿಮಾ ನೀಡಿದರೂ, ಪ್ರೇಕ್ಷಕರಿಗೆ ಅದು ಇಷ್ಟವಾಗಲಿಲ್ಲ. ಈ ಚಿತ್ರದಲ್ಲಿ, ಅಂಜಲಿ ಅವರು ರಾಮ್ ಚರಣ್ ಅವರ ಪತ್ನಿ ಪಾರ್ವತಿಯ ಪಾತ್ರವನ್ನು ನಿರ್ವಹಿಸಿದರು. ಅಲ್ಲದೆ, ವೃದ್ಧೆಯ ಪಾತ್ರದಲ್ಲಿಯೂ ಎಲ್ಲರ ಗಮನವನ್ನು ಸೆಳೆದರು.
ಅಂದಹಾಗೆ ನಟ ವಿಶಾಲ್, ಅಂಜಲಿ ಹಾಗೂ ವರಲಕ್ಷ್ಮಿ ಶರತ್ಕುಮಾರ್ ಅಭಿನಯದ ಮದಗಜರಾಜ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಸಂಕ್ರಾಂತಿಯಂದು ತಮಿಳಿನಲ್ಲಿ ಬಿಡುಗಡೆಯಾದ ಈ ಸಿನಿಮಾ ಇದೇ ಜನವರಿ 31 ರಂದು ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಹೀಗಾಗಿ ಸಿನಿಮಾದ ಪ್ರಚಾರ ಕಾರ್ಯ ಜೋರಾಗಿದೆ. ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಅಂಜಲಿ ಮತ್ತು ವರಲಕ್ಷ್ಮಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ, ಗೇಮ್ ಚೇಂಜರ್ ಸಿನಿಮಾದ ರಿಸಲ್ಟ್ ಬಗ್ಗೆ ಅಂಜಲಿಯನ್ನು ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರಿಸಿದ ಅಂಜಲಿ, ನಾನು ಒಬ್ಬ ನಟಿಯಾಗಿ ನನ್ನ ಜವಾಬ್ದಾರಿಯನ್ನು ಪೂರೈಸಿದ್ದೇನೆ. ಈ ಪಾತ್ರಕ್ಕಾಗಿ ನಾನು ನೂರಕ್ಕೆ ಶೇ. 200ರಷ್ಟು ಕೆಲಸ ಮಾಡಿದ್ದೇನೆ. ಅದು ನನ್ನ ಜವಾಬ್ದಾರಿಯೂ ಹೌದು. ಸಿನಿಮಾದ ಪ್ರಚಾರವನ್ನು ಮಾಡಿದ್ದೇನೆ ಮತ್ತು ಜನರ ಬಳಿಗೂ ಹೋಗಿದ್ದೇನೆ. ನಾನು ಈ ಸಿನಿಮಾವನ್ನು ತುಂಬಾ ನಂಬಿದ್ದೆ. ಈ ಸಿನಿಮಾ ಮೂಡಿಬಂದ ರೀತಿ ನನಗೆ ತುಂಬಾ ಸಂತೋಷ ಕೊಟ್ಟಿತು. ಏಕೆಂದರೆ, ಸಿನಿಮಾ ನೋಡಿದ ಸಾಮಾನ್ಯ ಪ್ರೇಕ್ಷಕರಲ್ಲಿ ಯಾರೂ ಕೂಡ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಲಿಲ್ಲ. ಒಳ್ಳೆಯ ಸಿನಿಮಾ ನೋಡಿದ್ದೇವೆ ಎಂದು ಹೇಳಿದರು. ಗೇಮ್ ಚೇಂಜರ್ ಒಂದು ಒಳ್ಳೆಯ ಸಿನಿಮಾ, ನೀವು ತುಂಬಾ ಚೆನ್ನಾಗಿ ಮಾಡಿದ್ದೀರಿ ಎಂದು ಹೇಳಿದರು. ನನಗೆ ಅಷ್ಟೇ ಸಾಕು. ಆದರೆ, ಸಿನಿಮಾದ ಫಲಿತಾಂಶದ ಬಗ್ಗೆ ಕೇಳಿದಾಗ ಕೆಲವೊಮ್ಮೆ ನೋವುಂಟಾಗುತ್ತದೆ ಎಂದು ಅಂಜಲಿ ಹೇಳಿದರು.
ಅಂದಹಾಗೆ ಸಂಕ್ರಾಂತಿ ಹಬ್ಬದಂದು ಚಿತ್ರಗಳ ಬಿಡುಗಡೆಯ ಬಗ್ಗೆ ಮಾತನಾಡಿದ ಅಂಜಲಿ, ಯಾವುದೇ ನಟ ಸಂಕ್ರಾಂತಿಯಂದು ಚಿತ್ರ ಬಿಡುಗಡೆಯಾಗಬೇಕೆಂದು ಬಯಸುತ್ತಾರೆ. ಸಂಕ್ರಾಂತಿಯಂದು ಚಿತ್ರ ಬಿಡುಗಡೆಯಾದರೆ, ಹೆಚ್ಚಿನ ಹೈಪ್ ಇರುತ್ತದೆ. ಸಂಕ್ರಾಂತಿಯಂದು ಚಿತ್ರ ಬಿಡುಗಡೆಯಾದರೆ, ಅದು ಚೆನ್ನಾಗಿರಲಿ ಅಥವಾ ಇಲ್ಲದಿರಲಿ ಜನರು ಅದನ್ನು ನೋಡುತ್ತಾರೆ ಎಂದು ಅಂಜಲಿ ಹೇಳಿದರು. ಸದ್ಯ ಅಂಜಲಿ ಅವರ ಮಾತುಗಳು ವೈರಲ್ ಆಗಿವೆ. (ಏಜೆನ್ಸೀಸ್)