

Rashmika Mandanna : ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ನಾಯಕಿಯಾಗಿ ಅಗ್ರ ಸ್ಥಾನಕ್ಕೇರಿರುವ ನಟಿ ರಶ್ಮಿಕಾ ಮಂದಣ್ಣ, ಸದ್ಯ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ತೆರೆಕಂಡ ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ.
ಇನ್ನು ರಶ್ಮಿಕಾರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ನಟ ವಿಜಯ್ ದೇವರಕೊಂಡ ಅವರನ್ನು ಲವ್ ಮಾಡುತ್ತಿದ್ದಾರೆ ಎಂಬ ಮಾತುಗಳು ಬಹಳ ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆದರೆ, ಈ ಬಗ್ಗೆ ರಶ್ಮಿಕಾ ಆಗಲಿ ವಿಜಯ್ ಆಗಲಿ ಓಪನ್ ಆಗಿ ಎಲ್ಲೂ ಮಾತನಾಡಿಲ್ಲ. ಆದರೆ, ಅವರಿಬ್ಬರ ನಡವಳಿಕೆ ಮಾತ್ರ ಇಬ್ಬರ ನಡುವೆ ಲವ್ ಇರುವ ಸುಳಿವು ನೀಡುತ್ತಲೇ ಇದೆ.
ತಾಜಾ ಸಂಗತಿ ಏನೆಂದರೆ, ರಶ್ಮಿಕಾ ಅವರು ಇದೇ ಮೊದಲ ಬಾರಿಗೆ ತಾವು ಪ್ರೀತಿ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ದಿ ಹಾಲಿವುಡ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ದೃಢಪಡಿಸಿದ್ದಾರೆ. ಆದರೆ, ನಟಿ ತಮ್ಮ ಸಂಗಾತಿಯ ಹೆಸರನ್ನು ಬಹಿರಂಗಪಡಿಸಲಿಲ್ಲ. ಹೇಳದೇ ಹೋದರು ಜನರಿಗೆ ಮಾತ್ರ ಆತ ಯಾರೆಂಬುದು ಚೆನ್ನಾಗಿಯೇ ಗೊತ್ತಿದೆ.
ಮೊದಲು ತಮ್ಮ ನೆಚ್ಚಿನ ಸ್ಥಳದ ಬಗ್ಗೆ ಮಾತನಾಡಿದ ರಶ್ಮಿಕಾ, ಮನೆಯು ನನಗೆ ಅತ್ಯಂತ ಸಂತೋಷವನ್ನು ನೀಡುವ ಸ್ಥಳವಾಗಿದೆ ಎಂದರು. ನಾನು ಸ್ಥಿರವಾಗಿರಲು ಸಹಾಯ ಮಾಡುವ ಏಕೈಕ ಸ್ಥಳವೆಂದರೆ, ಅದು ನನ್ನ ಮನೆ. ಯಶಸ್ಸು ಬಂದು ಹೋಗಬಹುದು ಮತ್ತು ಅದು ಶಾಶ್ವತವಲ್ಲ, ಆದರೆ, ಮನೆ ಯಾವಾಗಲೂ ಇದ್ದೇ ಇರುತ್ತದೆ. ಸತ್ಯವನ್ನು ಅರ್ಥಮಾಡಿಸುವ ಸ್ಥಳವಾಗಿದೆ. ಹಾಗಾಗಿ, ನಾನು ಆ ಸ್ಥಳದಿಂದಲೇ ಕೆಲಸ ಮಾಡುತ್ತೇನೆ. ನನಗೆ ಎಷ್ಟೇ ಪ್ರೀತಿ ಮತ್ತು ಖ್ಯಾತಿ ಸಿಕ್ಕರೂ, ನಾನಿನ್ನೂ ಮಗಳು, ಸಹೋದರಿ ಮತ್ತು ಸಂಗಾತಿ. ನಾನು ನನ್ನ ಜೀವನ ಮತ್ತು ನನ್ನ ಗೌಪ್ಯತೆಯನ್ನು ನಿಜವಾಗಿಯೂ ಗೌರವಿಸುತ್ತೇನೆ ಎಂದು ರಶ್ಮಿಕಾ ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ತಮ್ಮ ಜೀವನ ಸಂಗಾತಿಯ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡ ರಶ್ಮಿಕಾ, ಕಣ್ಣುಗಳು ಒಬ್ಬ ವ್ಯಕ್ತಿಯ ಆತ್ಮಕ್ಕೆ ಕಿಟಕಿ ಎಂದು ಹೇಳುತ್ತಾರೆ. ಆ ಮಾತನ್ನು ನಾನು ನಂಬುತ್ತೇನೆ. ನಾನು ಯಾವಾಗಲೂ ನಗುತ್ತೇನೆ. ಆದ್ದರಿಂದ ನಾನು ನಗು ಮುಖಗಳನ್ನು ಹೊಂದಿರುವ ಜನರತ್ತ ಆಕರ್ಷಿತಳಾಗುತ್ತೇನೆ. ನನ್ನ ಸಂಗಾತಿಯು ತನ್ನ ಸುತ್ತಲಿನ ಜನರನ್ನು ಗೌರವಿಸುವ ವ್ಯಕ್ತಿಯಾಗಿರುತ್ತಾನೆಂದು ರಶ್ಮಿಕಾ ಹೇಳಿದರು. ಆದರೆ, ತಮ್ಮ ಸಂಗಾತಿಯ ಸುಳಿವನ್ನು ಮಾತ್ರ ಬಿಟ್ಟುಕೊಡಲಿಲ್ಲ.
ಅಂದಹಾಗೆ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ಸಮಯದಿಂದ ಹರಿದಾಡುತ್ತಿದೆ. ವಿಜಯ್ ದೇವರಕೊಂಡ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾನು ಪ್ರೀತಿಸುತ್ತಿರುವುದಾಗಿ ದೃಢಪಡಿಸಿದರು. ನನಗೆ 35 ವರ್ಷ, ನಾನು ಇನ್ನೂ ಒಂಟಿ ಎಂದು ನೀವು ಭಾವಿಸುತ್ತೀರಾ? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಪ್ರೀತಿಯ ಬಲೆಯಲ್ಲಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದರು.
ನಾನು ಸಾಮಾನ್ಯವಾಗಿ ಡೇಟಿಂಗ್ ಮಾಡುವುದಿಲ್ಲ. ಬಲವಾದ ಸ್ನೇಹವನ್ನು ಬೆಳೆಸಿದ ನಂತರವೇ ನಾನು ಡೇಟಿಂಗ್ ಮಾಡುತ್ತೇನೆ. ಮದುವೆಯು ಯಾರ ವೃತ್ತಿಜೀವನಕ್ಕೂ ಅಡ್ಡಿಯಾಗಬಾರದು ಎಂದು ವಿಜಯ್ ದೇವರಕೊಂಡ ಹಿಂದೊಮ್ಮೆ ಸ್ಪಷ್ಟಪಡಿಸಿದ್ದರು. (ಏಜೆನ್ಸೀಸ್)