ನಿಮ್​ ಲೈಫಲ್ಲಿ ವಿಲನ್​ ಆಗೋಕೆ ನಾನ್​ ರೆಡಿ! ಬಿಗ್​ ಆಫರ್​ ಮುಂದಿಟ್ಟ ಯುವಕ, ಗ್ರೇಟ್​ ಎಂದ ನೆಟ್ಟಿಗರು Villain

Villain
Published on

Villain : ಸಿನಿಮಾಗಳಲ್ಲಿ ನೀವು ನಾಯಕ ಮತ್ತು ಖಳನಾಯಕನ ಪಾತ್ರಗಳನ್ನು ನೋಡಿರುತ್ತೀರಿ. ಸಿನಿಮಾ ಅಂದ ಮೇಲೆ ಈ ಎರಡು ಪಾತ್ರಗಳು ತುಂಬಾನೇ ಮುಖ್ಯ. ಇಲ್ಲವಾದಲ್ಲಿ ಆ ಕತೆಗೆ ರೋಚಕತೆ ಅನ್ನೋದೆ ಇರುವುದಿಲ್ಲ.

ನಾಯಕನಾದವನು ತನ್ನ ಕುಟುಂಬ ಮತ್ತು ಸ್ನೇಹಿತರನ್ನು ಖಳನಾಯಕನ ಹಿಡಿತದಿಂದ ರಕ್ಷಿಸುತ್ತಾನೆ. ಇಡೀ ಸಿನಿಮಾದಲ್ಲಿ ನಾಯಕನೇ ಗ್ರೇಟ್​ ಅನ್ನೋದು ನಿಮಗೆಲ್ಲರಿಗೂ ಗೊತ್ತಿದೆ. ಸಿನಿಮಾದಂತೆ ನಿಜ ಜೀವನದಲ್ಲಿಯೂ ನಿಮಗೆ ನಾಯಕನಾಗುವ ಅವಕಾಶ ಸಿಕ್ಕರೆ ಏನು ಮಾಡ್ತೀರಿ? ಮಲೇಶಿಯಾದ ಯುವಕನೊಬ್ಬ ಇಂತಹದೊಂದು ಆಫರ್ ನೀಡಿದ್ದಾನೆ. ಕೇಳಲು ಇದು ವಿಚಿತ್ರ ಎನಿಸಿದರೂ ಇದುವೇ ಸತ್ಯ.

ಹೌದು, 28 ವರ್ಷದ ಶಜಲಿ ಸುಲೇಮಾನ್ ಎಂಬ ಯುವಕ ತನ್ನ ಫೇಸ್​ಬುಕ್​ ಪೇಜ್​ನಲ್ಲಿ ಒಂದು ಪೋಸ್ಟ್​ ಹಂಚಿಕೊಂಡಿದ್ದಾನೆ. ನಿಮ್ಮ ಸಂಗಾತಿ ಮತ್ತು ಪಾಲಕರು ನಿಮ್ಮನ್ನು ದುರ್ಬಲರೆಂದು ಭಾವಿಸಿದ್ದಾರೆಯೇ? ನಿಮ್ಮ ಕೈಯಲ್ಲಿ ಏನು ಆಗುವುದಿಲ್ಲ ಎಂದು ಅಣಕಿಸುತ್ತಾರೆಯೇ? ನೀವು ನನಗೆ ಸರಿಯಾದ ಶುಲ್ಕ ಪಾವತಿಸಿದರೆ ಸಾಕು, ನೀವು ಹೀರೋ ಎಂದು ಸಾಬೀತುಪಡಿಸಲು ನಾನು ನಿಮಗೆ ಸಹಾಯ ಮಾಡಬಲ್ಲೆ ಎಂದು ಶಜಲಿ ಪೋಸ್ಟ್‌ ಮಾಡಿದ್ದಾನೆ.

ಅಂದಹಾಗೆ ಈ ಸೇವೆ ಪ್ರಸ್ತುತ ಮಲೇಶಿಯಾದ 'ಇಪೋ' ನಗರದಲ್ಲಿ ಲಭ್ಯವಿದೆ. ಸೋಮವಾರದಿಂದ ಶುಕ್ರವಾರದವರೆಗೆ 1,975 ರೂಪಾಯಿ ಮತ್ತು ಶನಿವಾರ ಹಾಗೂ ಭಾನುವಾರ 2,963 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಯುವಕ ಹೇಳಿದ್ದಾನೆ.

ನನಗೆ ಸಮಯ ಮತ್ತು ಸ್ಥಳವನ್ನು ಮಾತ್ರ ಹೇಳಿ. ನಾನು ನಿಮ್ಮ ಸಂಗಾತಿಗೆ ಕಿರುಕುಳ ನೀಡುವಂತೆ ನಟಿಸುತ್ತೇನೆ. ನಂತರ ನೀವು ನಾಯಕನಂತೆ ಬಂದು ಅವಳನ್ನು ಉಳಿಸಬಹುದು ಎಂದು ಶಜಲಿ ಹೇಳಿದ್ದಾನೆ. ಯುವಕ ತನ್ನ ಚಿತ್ರಗಳನ್ನು ಸಹ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಯುವಕ ಖಳನಾಯಕನಂತೆ ಕಾಣುತ್ತಿದ್ದಾನೆ. ನಾನು ಯಾರಿಗೂ ಹಾನಿ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾನೆ. ಯಾರಿಗೂ ನೋವು ಮಾಡುವುದಿಲ್ಲ. ಇದೊಂದು ರೀತಿಯಲ್ಲಿ WWE ಯಂತಿದೆ. ನಾನು ಸೋತು ಹಿಂತಿರುಗುತ್ತೇನೆ ಎಂದು ಹೇಳಿದ್ದಾನೆ.

ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅನೇಕ ಜನರು ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದೊಂದು ಅದ್ಭುತ ಪರಿಕಲ್ಪನೆ. ನಿಜಕ್ಕೂ ಒಳ್ಳೆಯ ಕೆಲಸ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net