

Suitcase Leads Cops : ರಾಷ್ಟ್ರ ರಾಜಧಾನಿ ದೆಹಲಿಯ ಘಾಜಿಪುರದ ಏರಿಯಾವೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ತುಂಬಿದ ಸೂಟ್ಕೇಸ್ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಲಿವಿಂಗ್ ಟುಗೆದರ್ನಿಂದ ಆರಂಭವಾದ ಕತೆ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ರಣ ರೋಚಕ ಸಂಗತಿ ಬೆಳಕಿಗೆ ಬಂದಿದೆ.
ಪೂರ್ವ ದೆಹಲಿಯ ಘಾಜಿಪುರದ ನಿರ್ಜನ ಪ್ರದೇಶವೊಂದರಲ್ಲಿ ಸೂಟ್ಕೇಸ್ ಒಂದು ಅನುಮಾನಾಸ್ಪದ ಸ್ಥಿತಿಯಲ್ಲಿ ಬಿದ್ದಿರುವುದಾಗಿ ಪೊಲೀಸರು ನಿನ್ನೆ (ಜ.26) ಮುಂಜಾನೆ ಮಾಹಿತಿ ಸ್ವೀಕರಿಸಿದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಟ್ಕೇಸ್ ಅನ್ನು ಓಪನ್ ಮಾಡಿದಾಗ ಅದರೊಳಗೆ ಸುಟ್ಟ ಸ್ಥಿತಿಯಲ್ಲಿರುವ ಮೃತದೇಹವನ್ನು ನೋಡಿ ಪೊಲೀಸರೇ ಒಂದು ಕ್ಷಣ ದಂಗಾದರು. ಬಳಿಕ ಕೊಲೆ ಮತ್ತು ಸಾಕ್ಷ್ಯಾನಾಶ ಪ್ರಕರಣ ದಾಖಲಿಸಿಕೊಂಡು, ವಿಶೇಷ ತನಿಖೆ ತಂಡ ರಚಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಅನೇಕ ಆಘಾತಕಾರಿ ಮಾಹಿತಿಗಳು ಒಂದೊಂದಾಗಿ ಗೊತ್ತಾಯಿತು.
ಈ ಬಗ್ಗೆ ಮಾತನಾಡಿರುವ ಪೂರ್ವ ದೆಹಲಿಯ ಉಪ ಪೊಲೀಸ್ ಆಯುಕ್ತ ಅಭಿಶೇಕ್ ಧನಿಯಾ, ಆರಂಭದಲ್ಲಿ ನಮಗೆ ಯಾವುದೇ ಸುಳಿವು ಸಿಗಲಿಲ್ಲ. ಕೇವಲ ಸುಟ್ಟ ಸೂಟ್ಕೇಸ್ ಮತ್ತು ಸುಟ್ಟ ಶವ ಮಾತ್ರ ನಮ್ಮ ಮುಂದೆ ಇತ್ತು. ಆ ಏರಿಯಾದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಲು ಆರಂಭಿಸಿದೆವು. ರೆಕಾರ್ಡ್ ಆಗಿರುವ ದೃಶ್ಯದಲ್ಲಿ ಹುಂಡೈ ವರ್ನಾ ಕಾರೊಂದನ್ನು ಗಮನಿಸಿದಾಗ, ಅದು ಅನುಮಾನಾಸ್ಪದವಾಗಿ ಕಾಣಿಸಿಕೊಂಡಿತು. ಶವ ಪತ್ತೆಯಾಗುವ ಗಂಟೆಗಳ ಮೊದಲು ಆ ಪ್ರದೇಶವನ್ನು ಕಾರು ದಾಟಿ ಹೋಯಿತು.
ಕಾರಿನ ಜಾಡನ್ನು ಹುಡುಕಿ ಹೊರಟಾಗ 22 ವರ್ಷದ ಅಮಿತ್ ತಿವಾರಿ ಎದುರಾದನು. ಆತನನ್ನು ವಶಕ್ಕೆ ಪಡೆಯಲಾಯಿತು. ಅಮಿತ್, ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಘಾಜಿಯಾಬಾದ್ನಲ್ಲಿ ವಾಸಿಸುತ್ತಿದ್ದಾನೆ. ಆತನ ಸ್ನೇಹಿತ ಅನುಜ್ ಕುಮಾರ್ ಕೂಡ ಸಿಸಿಟಿವಿ ಫುಟೇಜ್ನಲ್ಲಿ ಸೆರೆಯಾಗಿದ್ದಾನೆ. ಆತನನ್ನೂ ಕೂಡ ವಶಕ್ಕೆ ಪಡೆಯಲಾಯಿತು. ಅನುಜ್, ವೆಲ್ಡಿಂಗ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಘಾಜಿಯಾಬಾದ್ನಲ್ಲಿ ನೆಲೆಸಿದ್ದಾನೆ.
ಇಬ್ಬರನ್ನು ವಿಚಾರಣೆ ನಡೆಸಿದಾಗ ಅಮಿತ್, ಮೃತದೇಹದ ಗುರುತನ್ನು ಪತ್ತೆಹಚ್ಚಿ ತಪ್ಪೊಪ್ಪಿಕೊಂಡ. ಮೃತಳನ್ನು 22 ವರ್ಷದ ಶಿಲ್ಪಾ ಪಾಂಡೆ ಎಂದು ಗುರುತಿಸಲಾಗಿದೆ. ಸುಮಾರು ಒಂದು ವರ್ಷಗಳ ಕಾಲ ಆಕೆಯೊಂದಿಗೆ ಅಮಿತ್ ಲಿವಿಂಗ್ ಟುಗೆದರ್ನಲ್ಲಿದ್ದ. ಅಮಿತ್ನನ್ನು ಮದುವೆಯಾಗಲು ಶಿಲ್ಪಾ ಬಯಸಿದ್ದಳು. ಆದರೆ, ಆಕೆಯಿಂದ ದೂರವಾಗಲು ಅಮಿತ್ ಪ್ರಯತ್ನಿಸುತ್ತಿದ್ದ. ಶನಿವಾರ ರಾತ್ರಿ ಅಮಿತ್ ಕಂಠಪೂರ್ತಿ ಕುಡಿದಿದ್ದಾಗ ಶಿಲ್ಪಾ ಜತೆ ಜಗಳ ಮಾಡಿಕೊಂಡಿದ್ದ. ಜಗಳ ತಾರಕಕ್ಕೇರಿ, ತಾಳ್ಮೆ ಕಳೆದುಕೊಂಡ ಅಮಿತ್, ಶಿಲ್ಪಾಳನ್ನು ಉಸಿರುಗಟ್ಟಿಸಿ ಕೊಂದನು. ಬಳಿಕ ಆಕೆಯ ಮೃತದೇಹವನ್ನು ಸೂಟ್ಕೇಸ್ನಲ್ಲಿ ತುಂಬಿ, ಸ್ನೇಹಿತ ಅನುಜ್ನನ್ನು ಕರೆದು, ಆತನ ಸಹಾಯದಿಂದ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದುಬಂದಿದ್ದ.
ಅಂದಹಾಗೆ ಶಿಲ್ಪಾ ಮತ್ತು ಅಮಿತ್ ಹೊಸ ಪರಿಚಯವೇನಲ್ಲ. ಶಿಲ್ಪಾ, ಆರೋಪಿ ಅಮಿತ್ ಸೋದರಸಂಬಂಧಿ. ತನ್ನ ಕುಟುಂಬವನ್ನು ತೊರೆದು ಶಾಶ್ವತವಾಗಿ ತನ್ನೊಂದಿಗೆ ಜೀವಿಸುವಂತೆ ಶಿಲ್ಪಾ, ಅಮಿತ್ನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದಳು. ಆದರೆ, ಅಮಿತ್ ಇದ್ಯಾವುದಕ್ಕೂ ಒಪ್ಪಿರಲಿಲ್ಲ. ಅಲ್ಲದೆ, ಅಮಿತ್ ಕುಟುಂಬವನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಶಿಲ್ಪಾ ಬೆದರಿಕೆ ಹಾಕಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಶಿಲ್ಪಾ ಕೊಲೆಯಲ್ಲಿ ಅಂತ್ಯವಾಗಿದೆ.
ಆರಂಭದಲ್ಲಿ ಅಮಿತ್, ಪಶ್ಚಿಮ ಉತ್ತರ ಪ್ರದೇಶದ ಯಾವುದೋ ಒಂದು ಸ್ಥಳದಲ್ಲಿ ಶವವನ್ನು ಎಸೆದುಬರಲು ಪ್ಲಾನ್ ಮಾಡಿದ್ದ. ಆದರೆ, ಇಬ್ಬರೂ ಕಾರನಲ್ಲಿ ಹೊರಟ ಕೂಡಲೇ, ಎರಡು ಚೆಕ್ಪೋಸ್ಟ್ಗಳನ್ನು ದಾಟಿದರು. ಆದರೆ, ದಾರಿಯುದ್ದಕ್ಕೂ ಚೆಕ್ಪೋಸ್ಟ್ಗಳು ಇರುವ ಭಯದಿಂದ ಅಮಿತ್ ಶವವನ್ನು ಹತ್ತಿರದಲ್ಲೇ ವಿಲೇವಾರಿ ಮಾಡಲು ಇಬ್ಬರು ನಿರ್ಧರಿಸಿದರು.
ಮಾರ್ಗ ಮಧ್ಯೆ ಅಮಿತ್, ಪೆಟ್ರೋಲ್ ಪಂಪ್ನಿಂದ 160 ರೂ. ಮೌಲ್ಯದ ಡೀಸೆಲ್ ಖರೀದಿಸಿದ್ದಾನೆ. ನಂತರ ಇಬ್ಬರು ನಿರ್ಜನ ಪ್ರದೇಶಕ್ಕೆ ತಲುಪಿ, ಶಿಲ್ಪಾಳ ಶವವಿರುವ ಸೂಟ್ಕೇಸ್ ಅನ್ನು ಎಸೆದು ಬೆಂಕಿ ಹಚ್ಚಿದ್ದಾರೆ. ಅಮಿತ್ನನ್ನು ಗ್ರೇಟರ್ ನೋಯ್ಡಾದಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶಿಲ್ಪಾಳ ಸಾವಿನ ಸುದ್ದಿ ಕೇಳಿ ಆಕೆಯ ಪಾಲಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. (ಏಜೆನ್ಸೀಸ್)