

ಚೆನ್ನೈ: ದಿಗ್ಗಜ ಸಂಗೀತ ನಿರ್ದೇಶಕ ಇಳಯರಾಜ ಅವರು ತಮ್ಮ ಬಹುವರ್ಷಗಳ ಒಡನಾಡಿ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ಜರ್ಜರಿತರಾಗಿದ್ದಾರಂತೆ. ಈ ಕುರಿತು ವಿಡಿಯೋ ಮಾಡಿರುವ ಅವರು, ಆ ವಿಡಿಯೋದಲ್ಲಿ ತಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಂಡಿದ್ದಾರೆ.
ಬಾಲಸುಬ್ರಹ್ಮಣ್ಯಂ ಮತ್ತು ಇಳಯರಾಜ ಅವರು 50 ವರ್ಷ ಹಳೆಯ ಗೆಳೆಯರು. ಇಳಯರಾಜ ಅವರು ಸಂಗೀತ ನಿರ್ದೇಶಕರಾಗುವುದಕ್ಕಿಂತ ಮುನ್ನ, ಬಾಲಸುಬ್ರಹ್ಮಣ್ಯಂ ಅವರ ಬ್ಯಾಂಡ್ನಲ್ಲಿ ಸಂಗೀತಗಾರರಾಗಿದ್ದರು. ತಮ್ಮ ಗೆಳೆಯನ ನಿಧನದಿಂದ ತಮಗಾಗಿರುವ ನೋವು ಅಷ್ಟಿಷ್ಟಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
'ನಾನು ನಿನಗೆ ಬೇಗ ವಾಪಸ್ಸು ಬರುವುದಕ್ಕೆ ಹೇಳಿದ್ದೆ. ಆದರೆ, ನೀನು ನನ್ನನ್ನು ಬಿಟ್ಟು ಹೊರಟು ಹೋದೆ. ಸ್ವರ್ಗದಲ್ಲಿ ಗಂಧರ್ವರ ಎದುರು ಹಾಡುವುದಕ್ಕೆ ಹೊರಟುಹೋದೆಯಾ? ನೋವಿಗೂ ಒಂದು ಮಿತಿ ಇದೆ. ಆದರೆ, ನಿನ್ನ ಸಾವಿನ ನೋವನ್ನು ತಡೆಯುವುದಕ್ಕೆ ಆಗುತ್ತಿಲ್ಲ. ಮಾತುಗಳೇ ಬರುತ್ತಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಅದ್ಭುತ ಹಾಡುಗಳನ್ನು ಕೊಟ್ಟಿದ್ದು ಇಳಯರಾಜ. ಅಷ್ಟೇ ಅಲ್ಲ, ಬಾಲಸುಬ್ರಹ್ಮಣ್ಯಂ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಎರಡು ಹಾಡುಗಳನ್ನು ಸಹ ಕಂಪೋಸ್ ಮಾಡಿದವರೂ ಇಳಯರಾಜ ಅವರೇ. ಅವರಿಬ್ಬರ ಮಧ್ಯೆ ಕೆಲವು ವರ್ಷಗಳ ಮಧ್ಯೆ ಕಾರಣಾಂತರಗಳಿಂದ ಬಿರುಕು ಬಿಟ್ಟಿತ್ತು. ಆದರೆ, ಕಳೆದ ವರ್ಷ ಇಬ್ಬರೂ ಮತ್ತೆ ಒಂದಾಗಿದ್ದರು. ಈಗ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಹಳೆಯ ಗೆಳೆಯನನ್ನು ಬಿಟ್ಟು ಅಗಲಿದ್ದಾರೆ.