ಶಂಕರನ ಟೀಸರ್ ಸಪ್ಲೈ! ನಿಶ್ಚಿತ್ ಕರೋಡಿ, ದೀಪಿಕಾ ಆರಾಧ್ಯ ನಟಿಸಿರುವ ಚಿತ್ರ

Supplier Shankara_(141)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ಗಂಟು ಮೂಟೆ’ ಹಾಗೂ ‘ಟಾಮ್ ಆ್ಯಂಡ್ ಜೆರ್ರಿ’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ನಿಶ್ಚಿತ್ ಕರೋಡಿ ಅಭಿನಯಿಸಿರುವ ಮೂರನೇ ಚಿತ್ರ ‘ಸಪ್ಲೈಯರ್ ಶಂಕರ’. ಟೈಟಲ್ ಹೇಳುವಂತೆ ಅವರಿಲ್ಲಿ ಸಪ್ಲೈಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರ ರಂಜಿತ್ ನಿರ್ದೇಶನದಲ್ಲಿ ಮೂಡಿಬಂದಿದೆ. ನಿಶ್ಚಿತ್‌ಗೆ ದೀಪಿಕಾ ಆರಾಧ್ಯ ನಾಯಕಿಯಾಗಿದ್ದು, ಇತ್ತೀಚೆಗಷ್ಟೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು.

ಕಥೆ ಬರೆದು ನಿರ್ದೇಶಿಸಿರುವ ರಂಜಿತ್, ‘ಕಳೆದ ವರ್ಷ ಫೆಬ್ರವರಿಯಲ್ಲಿ ಚಿತ್ರ ಪ್ರಾರಂಭವಾಯಿತು. ಪಾತ್ರಕ್ಕಾಗಿ ನಾಯಕ ನಿಶ್ಚಿತ್ ಬಹಳ ಶ್ರಮಪಟ್ಟಿದ್ದಾರೆ. ಸದ್ಯ ಟೀಸರ್ ರಿಲೀಸ್ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು. ನಾಯಕ ನಿಶ್ಚಿತ್, ‘‘ಸಪ್ಲೈಯರ್ ಶಂಕರ’ ಟೈಟಲ್ ನೋಡಿ ಚಿತ್ರದಲ್ಲಿ ಬರೀ ಸಪ್ಲೈಯರ್ ಕಥೆ ಮಾತ್ರ ಇದೆ ಅಂತಲ್ಲ. ಬದಲಾಗಿ ಕಾಮಿಡಿ, ಲವ್, ಸೆಂಟಿಮೆಂಟ್, ಥ್ರಿಲ್ಲರ್ ಎಲ್ಲ ಅಂಶಗಳೂ ಇವೆ. ರಂಜಿತ್ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ’ ಎಂದು ಹೇಳಿಕೊಂಡರು.

ನಾಯಕಿ ದೀಪಿಕಾ ಆರಾಧ್ಯ, ‘ನಾನಿಲ್ಲಿ ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ರಿಲೀಸ್‌ಗೆ ಎದುರು ನೋಡುತ್ತಿದ್ದೇನೆ’ ಎಂದರು. ಚಿತ್ರಕ್ಕೆ ಆರ್.ಬಿ. ಭರತ್ ಸಂಗೀತ, ಸತೀಶ್ ಕುಮಾರ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net