ಚಿಕ್ಕಪ್ಪ-ಚಿಕ್ಕಮ್ಮ ಬಿಡುಗಡೆ ಮಾಡ್ತಾರೆ ನಿರಂಜನ್​ ಹೊಸ ಚಿತ್ರದ ಟೈಟಲ್​

title launch
Published on

ಬಹಳ ಕನಸುಗಳನ್ನು ಹೊತ್ತು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್​. ಆದರೆ, 'ಸೆಕೆಂಡ್​ ಹ್ಯಾಂಡ್​' ಚಿತ್ರ ಅವರಂದುಕೊಂಡಷ್ಟು ಸಕ್ಸಸ್​ ಆಗಲಿಲ್ಲ. ಅದರ ನಂತರ, 'ಅದ್ಧೂರಿ 2' ಎಂಬ ಇನ್ನೊಂದು ಚಿತ್ರದಲ್ಲಿ ಅವರು ನಟಿಸುತ್ತಾರೆ ಎಂದು ಸುದ್ದಿಯಾಯಿತು.

ಈಗ ಆ ಚಿತ್ರವನ್ನು ಬಿಟ್ಟು, ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ನಿರಂಜನ್​. ಈ ಚಿತ್ರದ ಹೆಸರನ್ನು ನಾಳೆ ಅಂದರೆ, ಆಗಸ್ಟ್​ 14ರಂದು ಬಿಡುಗಡೆಯಾಗಲಿದೆ. ನಿರಂಜನ್​ ಅವರ ಚಿಕ್ಕಪ್ಪ-ಚಿಕ್ಕಮ್ಮ (ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ) ಈ ಚಿತ್ರದ ಟೈಟಲ್​ ಬಿಡುಗಡೆ ಮಾಡಲಿದ್ದಾರೆ.

ಚಿತ್ರಕ್ಕೆ ಏನು ಹೆಸರಿಟ್ಟಿರಬಹುದು ಎಂಬ ಕುತೂಹಲ ಸಹಜ. ಚಿತ್ರತಂಡದವರು ಇದುವರೆಗೂ ಈ ಬಗ್ಗೆ ತುಟಿಕ್​-ಪಿಟಿಕ್​ ಎನ್ನದಿದ್ದರೂ, ಉಪೇಂದ್ರ ಅಭಿನಯದ ಚಿತ್ರಗಳ ಪೈಕಿ ಒಂದು ಚಿತ್ರದ ಹೆಸರನ್ನೇ ಪುನಃ ಇಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಉಪೇಂದ್ರ ಬಹಳಷ್ಟು ಚಿತ್ರಗಳಲ್ಲಿ ನಟಿಸಿರುವುದರಿಂದ, ಯಾವ ಹೆಸರು ಎಂದು ಊಹಿಸುವುದು ಕಷ್ಟ.

ಈಗಾಗಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಜುಲೈ 18ರಂದು ಪ್ರಾರಂಭವಾದ ಚಿತ್ರೀಕರಣ, ಬೆಂಗಳೂರು ಸುತ್ತುಮುತ್ತ ನಡೆಯುತ್ತಿದೆ. ಈ ಮಧ್ಯೆ, ಚಿತ್ರದ ಹೆಸರನ್ನು ಅಧಿಕೃತವಾಗಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ.

ಈ ಚಿತ್ರದಲ್ಲಿ ನಿರಂಜನ್​ ಡ್ಯಾನ್ಸರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ ಮತ್ತು ಡ್ಯಾನ್ಸ್​ ಸುತ್ತಲೇ ಈ ಚಿತ್ರ ಸುತ್ತುತ್ತದೆ ಎಂದು ಹೇಳಲಾಗುತ್ತಿದೆ. ರಾಘವೇಂದ್ರ ಎನ್ನುವವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ರಮೇಶ್​ ವೆಂಕಟೇಶ್​ ಬಾಬು ಅವರು ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net