ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆಗುತ್ತಿದೆ 'ಚುಪ್​ಕರ್​ ಕಂಗನಾ'!

Kangana Ranut - Final 1
Published on

ಮುಂಬೈ: ಸೋಷಿಯಲ್​ ಮೀಡಿಯಾದಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿರುವವರೆಂದರೆ ಅದು ಕಂಗನಾ ರಣಾವತ್​. ಕಳೆದ ಕೆಲವು ದಿನಗಳಿಂದ ಕಂಗನಾ ಹಲವು ವಿಷಯಗಳ ಬಗ್ಗೆ ಸಿಕ್ಕಾಪಟ್ಟೆ ಮಾತನಾಡುತ್ತಿದ್ದು, ಜನ ಅದೆಷ್ಟು ರೋಸಿ ಹೋಗಿದ್ದಾರೆಂದರೆ, ಇದೀಗ 'ಚುಪ್​ಕರ್​ ಕಂಗನಾ' ಎಂಬ ಅಭಿಯಾನವನ್ನೇ ಪ್ರಾರಂಭಿಸಿದ್ದು, ಈ ಅಭಿಯಾನ ಟ್ರೆಂಡ್​ ಆಗುತ್ತಿದೆ.

ವಿಷಯ ಏನೆಂದರೆ, ಕೆಲವು ದಿನಗಳ ಹಿಂದೆ ಮುಂಬೈ ಪೊಲೀಸರಿಂದ ಕಂಗನಾಗೆ ಸಮನ್ಸ್​ ಹೋಗಿದೆ. ಬರೀ ಕಂಗನಾಗಷ್ಟೇ ಅಲ್ಲ, ಅವರ ಅಕ್ಕ ರಂಗೋಲಿ ಚಾಂಡೆಲ್​ಗೆ ಸಹ ಕೋಮು ಸೌಹಾರ್ದತೆ ಕದಡುವ ವಿಚಾರದಲ್ಲಿ ಸಮನ್ಸ್​ ಹೋಗಿದೆ. ಬಾಂದ್ರಾ ಪೊಲೀಸರ ಎದುರು ಅಕ್ಟೋಬರ್​ 25 ಅಥವಾ 26ರಂದು ಬಂದು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.

ಈ ಕುರಿತು ಟ್ವೀಟ್​ ಮಾಡಿರುವ ಕಂಗನಾ, 'ಬಹುಶಃ ಪೊಲೀಸರಿಗೆ ಕಂಗನಾ ನೆನಪು ಹೆಚ್ಚಾಗುತ್ತಿರಬಹುದು. ಅವರು ನನ್ನ ಬಹಳ ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂದನಿಸುತ್ತದೆ. ಡೋಂಟ್​ ವರಿ, ನಾನು ಬಹಳ ಬೇಗ ಬರ್ತೀನಿ' ಎಂದು ಕಂಗನಾ ಉತ್ತರಿಸಿದ್ದರು.

ಅಷ್ಟಾಗಿದ್ದರೆ ಪರವಾಗಿರಲಿಲ್ಲ. 'ಹೇಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಕೋಟೆಯನ್ನು ಒಡೆಯಲಾಯಿತೋ, ನನ್ನ ಮನೆಯನ್ನೂ ಅದೇ ರೀತಿ ಒಡೆಯಲಾಗಿದೆ. ಹೇಗೆ ಸಾವರ್ಕರ್​ ಅವರನ್ನು ಜೈಲಿಗೆ ತಳ್ಳಲಾಯಿತೋ, ಈಗ ನನ್ನನ್ನೂ ಜೈಲಿಗೆ ತಳ್ಳಲಾಗುತ್ತಿದೆ. ಅಸಹಿಷ್ಣು ಗ್ಯಾಂಗ್​ನವರ ಬಳಿ ಹೋಗಿ ಈ ಅಸಹಿಷ್ಣು ದೇಶದಲ್ಲಿ ಎಷ್ಟೆಲ್ಲಾ ಕಷ್ಟಪಡಬೇಕಾಗುತ್ತಿದೆ ಎಂದು ಕೇಳಿ' ಎಂದು ಆಮೀರ್​ ಖಾನ್​ ಅವರನ್ನು ಟ್ಯಾಗ್​ ಮಾಡಿದ್ದರು.

ಯಾವಾಗ ಕಂಗನಾ ತಮ್ಮನ್ನು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ವೀರ್ ಸಾವರ್ಕರ್​ ಅವರಿಗೆ ಹೋಲಿಸಿಕೊಂಡರೋ, ಆಗ ನೆಟ್ಟಿಗರಿಗೆ ನಿಜಕ್ಕೂ ಬೇಸರವಾದಂತಿದೆ. ಹೀಗೆ ಅತಿರೇಕ ಹೇಳಿಕೆಗಳನ್ನು ನಿಲ್ಲಿಸುವಂತೆ, ಸೋಷಿಯಲ್​ ಮೀಡಿಯಾದಲ್ಲಿ 'ಚುಪ್​ಕರ್​ ಕಂಗನಾ' ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ಇನ್ನಾದರೂ ಕೆಟ್ಟ ಮಾತನಾಡದಂತೆ ಮತ್ತು ದೇಶಕ್ಕಾಗಿ ಮಡಿದವರ ಜತೆಗೆ ಹೋಲಿಸಿಕೊಳ್ಳದಂತೆ ತಾಕೀತು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net