

ಬೆಂಗಳೂರು: ನವೆಂಬರ್ ತಿಂಗಳಲ್ಲಿ ಸಾಲುಸಾಲು ಚಿತ್ರಗಳು ಬಿಡುಗಡೆಯಾಗಲಿಕ್ಕೆ ತಯಾರಿ ನಡೆಸಿವೆ. ಈ ಪೈಕಿ 'ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ’ ಎಂಬ ಕ್ರೈಂ ಥ್ರಿಲ್ಲರ್ ಚಿತ್ರ ಸಹ ಒಂದು.
ಇದುವರೆಗೂ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿ, ‘ಆವಾಹಯಾಮಿ’, ‘ಜವ’ ಚಿತ್ರಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಸುನೀಲ್ ಕುಮಾರ್ ಬಸವಂತಪ್ಪ, ‘ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಬರೀ ನಿರ್ದೇಶನವಷ್ಟೇ ಅಲ್ಲ, ಕಥೆ, ಚಿತ್ರಕಥೆ, ಸಾಹಿತ್ಯ ಸಂಭಾಷಣೆ ಸಹ ಅವರೇ ರಚಿಸಿದ್ದಾರೆ.
ಬಲರಾಜ್ ವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಹೆಚ್ಚಾಗಿ ಹೊಸಬರೇ ಇದ್ದಾರೆ. ಈ ಚಿತ್ರವನ್ನು ಧ್ವನಿ ಸಿನಿ ಕ್ರಿಯೇಷನ್ನಡಿ ದರ್ಶನ್ ರಾಘವಯ್ಯ ನಿರ್ಮಾಣ ಮಾಡಿದ್ದು ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಉಳಿದಂತೆ ಮನಸ್ ಗೇಬ್ರಿಯಲ್, ರೇವತಿ ಹೊಳ್ಳ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ, 'ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ’ ಚಿತ್ರವು ಬಿಡುಗಡೆಗೂ ಮುನ್ನವೇ ಮೆಲ್ಬರ್ನ್ ಹಾಗೂ ಬೆಂಗಳೂರಿನಲ್ಲಿ ಪ್ರೀಮಿಯರ್ ಆಗಿದೆ. ಸುಮಂತ್ ಬದ್ರಿ ಛಾಯಾಗ್ರಹಣ, ಯತೀಶ್ ವೈಡಿ ಸಂಕಲನ, ಶ್ರೀಹರಿ ಸಂಗೀತ ಇರುವ ಈ ಚಿತ್ರವು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ನಂತರ ಅಮೆರಿಕಾ, ಯುಕೆ ಮುಂತಾದ ಕಡೆ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.