ನಯನತಾರಾರಿಂದ ಅಜಿತ್​ ಮೇಲೆ ಮಾಟ ಮಂತ್ರ? ಕಾಲಿವುಡ್​ನಲ್ಲಿ ಬಿರುಗಾಳಿ ಎಬ್ಬಿಸಿದ ಟೆಂಪಲ್​ ವಿಸಿಟ್​! Nayanthara

Nayanthara
Published on

ಚೆನ್ನೈ: ಲೇಡಿ ಸೂಪರ್​ಸ್ಟಾರ್​ ನಯನತಾರಾ ( Nayanthara ) ಮತ್ತು ತಲಾ ಅಜಿತ್, ತೆರೆಯ ಮೇಲೆ ಮೋಡಿ ಮಾಡಿದ ತಮಿಳು ಚಿತ್ರರಂಗದ ಯಶಸ್ವಿ ಜೋಡಿಗಳಲ್ಲಿ ಒಂದು. ಅವರಿಬ್ಬರು ಬಿಲ್ಲ, ಆರಂಭಮ್, ವಿಶ್ವಾಸಂ ಮತ್ತು ಏಗನ್​ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಚಿತ್ರಗಳು ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಯಶಸ್ಸು ಕಂಡವು. ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ ನಯನತಾರಾ ಮತ್ತು ಅಜಿತ್ ಒಟ್ಟಿಗೆ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅನೇಕ ವದಂತಿಗಳು ಹರಿದಾಡಲು ಶುರುವಾಗಿದೆ.

ನಯನತಾರಾ ಅವರ ಪತಿ ವಿಘ್ನೇಶ್ ಶಿವನ್ ಅವರ ನಿರ್ದೇಶನದಲ್ಲಿ ಅಜಿತ್​ಗೆ ಒಂದು ಸಿನಿಮಾ ಮಾಡಲು ಮಾತುಕತೆಗಳು ನಡೆದಿದ್ದವು. ಈ ಸಿನಿಮಾದ ಯೋಜನೆಯನ್ನು ನಿರ್ಮಾಣ ಕಂಪನಿ ಲೈಕಾ ಪ್ರೊಡಕ್ಷನ್​ ಈ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ, ಏನಾಯ್ತೋ ಕಾಣೆ, ವಿಘ್ನೇಶ್ ಅವರನ್ನು ಅರ್ಧದಲ್ಲೇ ಕೈಬಿಡಲಾಯಿತು. ವಿಘ್ನೇಶ್​ ಬದಲು ಮ್ಯಾಗಿಜ್ ತಿರುಮೇನಿ ನಿರ್ದೇಶನದ ವಿಡಾಮುಯರ್ಚಿ ಸಿನಿಮಾದಲ್ಲಿ ಅಜಿತ್​ ನಟಿಸಿದರು. ಆದರೆ, ಈ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಕಮಾಲ್​ ಮಾಡಲಿಲ್ಲ.

ಈ ಬದಲಾವಣೆಗೆ ಮುಖ್ಯ ಕಾರಣವೆಂದರೆ, ನಿರ್ಮಾಣ ಸಂಸ್ಥೆ ಲೈಕಾಗೆ ವಿಘ್ನೇಶ್ ಅವರು ಬರೆದಿದ್ದ ಕಥೆ ಇಷ್ಟವಾಗಲಿಲ್ಲ. ಈ ಘಟನೆಯ ನಂತರ, ನಯನತಾರಾ ಮತ್ತು ಅಜಿತ್ ನಡುವಿನ ಸ್ನೇಹದಲ್ಲಿ ಬಿರುಕು ಉಂಟಾಗಿದೆ ಎಂಬ ವದಂತಿಗಳು ಹುಟ್ಟಿಕೊಂಡಿವೆ.

ಸಾಕಷ್ಟು ವದಂತಿಗಳ ನಡುವೆಯೇ ಇತ್ತೀಚೆಗೆ ಪ್ರಮುಖ ತಮಿಳು ಮಾಧ್ಯಮವೊಂದರಲ್ಲಿ ಸುದ್ದಿಯೊಂದು ಪ್ರಸಾರವಾಯಿತು. ಅದೇನೆಂದರೆ, ತನ್ನ ಪತಿಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಅಜಿತ್ ಮತ್ತು ಲೈಕಾ ಪ್ರೊಡಕ್ಷನ್ಸ್ ವಿರುದ್ಧ ನಯನತಾರಾ ಅವರು ಪಿತೂರಿ ನಡೆಸಿದ್ದಾರೆ ಎಂಬ ಸುದ್ದಿ ವೈರಲ್​ ಆಯಿತು. ಅಜಿತ್​ ಮತ್ತು ಲೈಕಾ ಪ್ರೊಡಕ್ಷನ್​ ಮೇಲೆ ನಯನತಾರಾ ಅವರು ಮಾಟ ಮಂತ್ರ ಮಾಡಿಸಿದ್ದಾರೆ. ಇದರಿಂದ ಅಜಿತ್‌ ಮತ್ತು ಲೈಕಾ ಪ್ರೊಡಕ್ಷನ್​ಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಅಲ್ಲದೆ, ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಇದೇ ಕಾರಣಕ್ಕೆ ಇತ್ತೀಚೆಗೆ, ಅಜಿತ್ ಅವರು ಕೇರಳ ಸೇರಿದಂತೆ ಅನೇಕ ದೇವಾಲಯಗಳಿಗೆ ಭೇಟಿ ನೀಡಿದ್ದರು. ಇದು ಪರಿಹಾರಕ್ಕಾಗಿ ಮಾಡಿದ ಭೇಟಿ ಎಂದು ವರದಿಯಾಗಿತ್ತು.

ಈ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹು ಬೇಗನೆ ಹರಡಿತು. ಆದರೆ, ಸತ್ಯಾಸತ್ಯತೆಯನ್ನು ಪರಿಶೀಲಿಸದೇ ವರದಿ ಮಾಡಿದ ಮಾಧ್ಯಮದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ತಮಿಳುನಾಡಿನ ಪ್ರಮುಖ ಮಾಧ್ಯಮವೊಂದರಲ್ಲಿ ಈ ಸುದ್ದಿ ಬಂದಿದೆ ಎಂದು ಖ್ಯಾತ ತಮಿಳು ಯೂಟ್ಯೂಬರ್ ಅಹ್ಮದ್ ಮೀರನ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೆ, ಆ ಮಾಧ್ಯಮದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ನಯನತಾರಾ ಮತ್ತು ಅಜಿತ್ ಸರ್ ನಡುವೆ ಬಿರುಕು ಇದೆ ಎಂಬ ಗಾಸಿಪ್‌ಗಳು ಹರಡಿವೆ. ಆದರೆ, ಅದು ಕೇವಲ ಗಾಸಿಪ್ ಮಾತ್ರ. ಅವರಿಬ್ಬರ ನಡುವೆ ಯಾವುದೇ ಸಮಸ್ಯೆ ಇಲ್ಲ. ನಯನತಾರಾ ಅವರು ಹೆಸರನ್ನು ಎಳೆದು ಅವರಿಬ್ಬರ ನಡುವಿನ ವೃತ್ತಿಪರ ಸಮಸ್ಯೆಯನ್ನು ಮಾಟಮಂತ್ರ ಎಂದು ಬಿಂಬಿಸುವುದು ನಾಚಿಕೆಗೇಡಿನ ಸಂಗತಿ ಎಂದು ಅಹ್ಮದ್ ಮೀರನ್ ಹೇಳಿದ್ದಾರೆ.

ಅಂದಹಾಗೆ, ನಯನತಾರಾ ಬಗ್ಗೆ ಇಂತಹ ಗಾಸಿಪ್‌ಗಳು ಸಾಮಾನ್ಯ. ದಕ್ಷಿಣ ಭಾರತದಲ್ಲಿ, ಈ ರೀತಿಯ ಗಾಸಿಪ್‌ಗಳನ್ನು ಎದುರಿಸಿದ ನಟಿಯರು ತುಂಬಾ ಅಪರೂಪ. ಆದರೆ, ನಯನತಾರಾಗೆ ಇದು ಮಾಮೂಲಿ. ನಯನತಾರಾ ಅವರು ಸಾಮಾನ್ಯವಾಗಿ ಗಾಸಿಪ್ ಅನ್ನು ನಿರ್ಲಕ್ಷಿಸುತ್ತಾರೆ. ಅದರ ಬಗ್ಗೆ ಅವರು ವಿರಳವಾಗಿ ಪ್ರತಿಕ್ರಿಯಿಸುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net