

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನ ಹುಳುಕುಗಳೆಲ್ಲಾ ಒಂದೊಂದಾಗಿ ಹೊರಬರುತ್ತಿದೆ. ಮೊದಲು ನೆಪೋಟಿಸಂ (ಸ್ವಜನಪಕ್ಷಪಾತ)ದಿಂದ ಶುರುವಾದ ಚರ್ಚೆ ಎಲ್ಲಿಂದ ಎಲ್ಲಿಗೋ ಹೋಗಿ ಬಿಟ್ಟಿದೆ. ಈ ಬಗ್ಗೆ ಹಿರಿಯ ನಟ ನಾಸೀರುದ್ದೀನ್ ಷಾ ಬೇಸರ ವ್ತಕ್ತಪಡಿಸಿದ್ದಾರೆ.
ಇಷ್ಟು ದಿನ ಈ ವಿಷಯದ ಬಗ್ಗೆ ಮುಗುಂ ಆಗಿದ್ದ ಷಾ, ಇದೀಗ ಮೊದಲ ಬಾರಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಏನೇನೋ ಮಾತಾಡುವ ಮೂಲಕ ನಮ್ಮ ಮಾನವನ್ನು ನಾವೇ ಹಾರಜಿಗೆ ಇಡುತ್ತಿದ್ದೇವೆ ಎಂದು ಹೇಳಿದ್ದಾರೆ.
'ಸುಶಾಂತ್ ಸಾವಿನ ಬಗ್ಗೆ ನನಗೆ ಬೇಸರವಿದೆ. ಆದರೆ, ಆ ನಂತರ ನಡೆದ ವಿದ್ಯಾಮಾನಗಳಿವೆಯಲ್ಲಾ, ಅದು ಮಾತ್ರ ಅನಾವಶ್ಯಕ ಎಂದನಿಸುತ್ತಿದೆ. ಏನೇನಾ ಮಾತಾಡುವ ಮೂಲಕ, ಚರ್ಚೆಯನ್ನು ಇನ್ನ್ಯಾವುದೋ ದಿಕ್ಕಿನತ್ತ ಕೊಂಡೊಯ್ಯುವ ಮೂಲಕ ನಮ್ಮ ಮಾನವನ್ನ ನಾವೇ ಹರಾಜಿಗೆ ಇಡುತ್ತಿದ್ದೇವೆ. ಯಾಕೆ ಇಷ್ಟೆಲ್ಲಾ ಆಗುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ' ಎಂದು ಷಾ ಹೇಳಿದ್ದಾರೆ.
'ಇಷ್ಟು ದಿನ ಸುಮ್ಮನಿದ್ದ ಕಲಾವಿದರು ಯಾಕೆ ಪೋಸ್ಟರ್ನಲ್ಲಿ ತಮಗೆ ಜಾಗ ಸಿಗಲಿಲ್ಲ ಎಂದು ದೂರುತ್ತಿದ್ದಾರೆ? ಯಾವಾಗಲೋ ಕೈತಪ್ಪಿ ಹೋದ ಚಿತ್ರದ ಬಗ್ಗೆ ಈಗ ಯಾಕೆ ಮಾತನಾಡುತ್ತಿದ್ದಾರೆ? ಎಷ್ಟೋ ಜನರಿಗೆ ಅದೆಷ್ಟೋ ಸಿನಿಮಾಗಳು ಮಿಸ್ ಆಗಿವೆ. ಎಲ್ಲರೂ ಆ ಬಗ್ಗೆ ಮಾತನಾಡುತ್ತಾ ಹೋದರೆ, ಮುಗಿಯದ ಕಥೆ ಆಗುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಅತ್ಯಂತ ಕೆಟ್ಟ ಜಾಗವಾಗಿ ಚಿತ್ರರಂಗ ತೋರುತ್ತದೆ' ಎಂದು ಅವರು ಹೇಳಿದ್ದಾರೆ.
ಈ ತರಹದ ಸಮಸ್ಯೆಗಳು, ಎಲ್ಲಾ ಚಿತ್ರರಂಗಳಲ್ಲೂ ಸಾಮಾನ್ಯ ಎಂದಿರುವ ಅವರು, 'ಮೊದಲು ಚರ್ಚೆ ನಿಲ್ಲಿಸಿ. ಸುಶಾಂತ್ ಅವರನ್ನು ನೆಮ್ಮದಿಯಾಗಿರುವುದಕ್ಕೆ ಬಿಡಿ. ಅವರನ್ನು ಮುಂದಿಟ್ಟುಕೊಂಡು ಮಾತನಾಡಬೇಕಿ' ಎಂದಿದ್ದಾರೆ.
ಹಿಂದೊಮ್ಮೆ ಬಾಲಿವುಡ್ನ ಸೂಪರ್ಸ್ಟಾರ್ ರಾಜೇಶ್ ಖನ್ನಾ ವಿರುದ್ಧ ಷಾ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಅವರೊಬ್ಬ ಸಾಮಾನ್ಯ ನಟ ಎಂದಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಯೂ ಆಗಿತ್ತು. ಈಗ ಬುದ್ಧಿ ಹೇಳುತ್ತಿರುವ ಅವರು, ಆಗ್ಯಾಕೆ ಅಂತಹ ಮಾತುಗಳನ್ನಾಡಿ ಚರ್ಚೆ ಹುಟ್ಟುಹಾಕಿದರು ಎಂಬ ಪ್ರಶ್ನೆ ಸಹಜ. ಈ ಕುರಿತು ಮಾತನಾಡಿರುವ ಅವರು, ರಾಜೇಶ್ ಖನ್ನಾ ಬಗ್ಗೆ ತಾನು ಹಾಗೆ ಮಾತನಾಡಬಾರದಿತ್ತು ಎಂದು ಒಪ್ಪಿಕೊಂಡಿದ್ದಾರೆ.
'ನಾನು ರಾಜೇಶ್ ಖನ್ನಾ ಅವರ ಬಗ್ಗೆ ಮಾತನಾಡಬಾರದಿತ್ತು. ನಾನು ಅವರ ಬಗ್ಗೆ ನೇರವಾಗಿ ದೂರಿಲ್ಲ. ಯಾವುದೋ ವಿಷಯ ಬಂದಾಗ, ಅವರ ಉದಾಹರಣೆ ಕೊಟ್ಟೆ. ಅವರನ್ನು ಪ್ರೀತಿಸುವ ಲಕ್ಷಾಂತರ ಜನರಿದ್ದಾರೆ. ನನ್ನ ಮಾತುಗಳಿಂದ ಅವರಿಗೆಲ್ಲಾ ಬೇಸರ ಆಯ್ತು. ಬಹಳ ಪರ್ಸನಲ್ ಆಗಿ ತೆಗೆದುಕೊಂಡರು' ಎಂದು ಷಾ ಹೇಳಿದ್ದಾರೆ.