

ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಅವರ ಎರಡನೆಯ ಚಿತ್ರ 'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್' ಚಿತ್ರವು ಇದೇ ಆಗಸ್ಟ್ 12ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೆ ಮುಂಚಿತವಾಗಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಟ್ರೇಲರ್ನಲ್ಲಿ ಕರಣ್ ಜೋಹರ್ ಅವರೇ ಹೆಸರಿಲ್ಲ ಎನ್ನುವುದು ಹಲವರಿಗೆ ಆಶ್ಚರ್ಯ ತರಿಸಿದೆ.
ಜಾಹ್ನವಿ ಅವರನ್ನು 'ಧಡಕ್' ಎಂಬ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದು ಕರಣ್ ಜೋಹರ್. ಆ ನಂತರ ಅವರು 'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್' ಚಿತ್ರವನ್ನು ನಿರ್ಮಿಸಿದ್ದಾರೆ. ಆದರೆ, ಚಿತ್ರದ ಟ್ರೇಲರ್ನಲ್ಲಾಗಲೀ, ಪೋಸ್ಟರ್ಗಳಲ್ಲಾಗಲೀ ಎಲ್ಲೂ ಕರಣ್ ಜೋಹರ್ ಅವರ ಹೆಸರು ಇಲ್ಲ. ಯಾಕಿಲ್ಲ ಎಂದರೆ ಅದಕ್ಕೆ ಕಾರಣ ನೆಪೋಟಿಸಂ (ಸ್ವಜನಪಕ್ಷಪಾತ) ಎಂದು ಹೇಳಲಾಗುತ್ತಿದೆ.
ಹೌದು, ಜಾಹ್ನವಿ ಕಪೂರ್ ಸೇರಿದಂತೆ ಹಲವು ಸ್ಟಾರ್ ಮಕ್ಕಳನ್ನು ಕರಣ್ ಜೋಹರ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅದೇ ಅವರಿಗೆ ಮುಳುವಾಗಿ ಪರಿಣಮಿಸಿದೆ ಎಂದರೆ ತಪ್ಪಿಲ್ಲ. ಬರೀ ಸ್ಟಾರ್ ಮಕ್ಕಳನ್ನು ಮಾತ್ರ ಪೋಷಿಸುತ್ತಾರೆ ಮತ್ತು ಹೊರಗಿನಿಂದ ಬಂದವರನ್ನು ಕಡೆಗಣಿಸುತ್ತಾರೆ ಎಂಬ ಆರೋಪ ಕರಣ್ ಮೇಲೆ ಇತ್ತೀಚಿನ ದಿನಗಳಲ್ಲಿ ವಿಪರೀತ ಕೇಳಿ ಬರುತ್ತಿದೆ.
ಇಂತಹ ಸಂದರ್ಭದಲ್ಲಿ 'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್' ಚಿತ್ರದಲ್ಲಿ ಮತ್ತೆ ಕರಣ್ ಜೋಹರ್ ಹೆಸರು ಕಾಣಿಸಿಕೊಂಡರೆ, ನಾಳೆ ಚಿತ್ರಕ್ಕೆ ಸಮಸ್ಯೆ ಆಗಬಹುದು, ಜನ ನೆಪೋಟಿಸಂ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಚಿತ್ರವನ್ನು ನೋಡದಿರಬಹುದು ಎಂಬ ಶಂಕೆ ಚಿತ್ರತಂಡದವರನ್ನು ಸಹಜವಾಗಿಯೇ ಕಾಡಿದೆ. ಅದೇ ಕಾರಣಕ್ಕೆ, ಚಿತ್ರದ ಪೋಸ್ಟರ್ ಮತ್ತು ಟ್ರೇಲರ್ನಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಬರೀ ಕರಣ್ ಮತ್ತು ಧರ್ಮ ಪ್ರೊಡಕ್ಷನ್ಸ್ ಹೆಸರು ಬಿಟ್ಟರೆ ನೂರು ಪ್ರಶ್ನೆ ಏಳುತ್ತವೆ. ಹಾಗಾಗಿ ಯಾರ ಹೆಸರೂ ಬೇಡ ಎಂದು ಚಿತ್ರತಂಡ ತೀರ್ಮಾನಿಸಿದಂತಿದೆ. ಹಾಗಾಗಿ ಬರೀ ಕರಣ್ ಹೆಸರಷ್ಟೇ ಅಲ್ಲ, ನಿರ್ದೇಶಕ ಶರಣ್ ಶರ್ಮಾ ಸೇರಿದಂತೆ ಯಾರೊಬ್ಬರ ಹೆಸರನ್ನೂ ಪೋಸ್ಟರ್ ಅಥವಾ ಟ್ರೇಲರ್ನಲ್ಲಿ ಹಾಕಿಲ್ಲ. ಬರೀ ಜಾಹ್ನವಿ ಹೆಸರನ್ನು ಮಾತ್ರ ಮುಂದಿಟ್ಟುಕೊಂಡು ಚಿತ್ರ ಬಿಡುಗಡೆ ಮಾಡಲಾಗಿದೆ.
'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್' ಚಿತ್ರವು ಏಪ್ರಿಲ್ನಲ್ಲೇ ಬಿಡುಗಡಯಾಗಬೇಕಿತ್ತು. ಆದರೆ, ಕರೊನಾ ಹಾವಳಿಯಿಂದ ಇದೀಗ ಚಿತ್ರಮಂದಿರದ ಬದಲಾಗಿ, ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗುತ್ತಿದೆ.