

ಸಂಜಯ್ ದತ್ ಅಭಿನಯದ ‘ತೋರ್ಬಾಜ್’ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಆ ನಂತರ ಯಾವೊಂದು ಚಿತ್ರದಲ್ಲೂ ನರ್ಗಿಸ್ ಫಕ್ರಿ ನಟಿಸಿರಲಿಲ್ಲ. ಮುಂದೇನು ಎಂಬ ಪ್ರಶ್ನೆ ಅಭಿಮಾನಿಗಳಿಗಷ್ಟೇ ಅಲ್ಲ, ನರ್ಗಿಸ್ಗೆ ಸಹ ಇತ್ತು. ಆ ಪ್ರಶ್ನೆಗೆ ಇದೀಗ ಕೊನೆಗೂ ಉತ್ತರ ಸಿಕ್ಕಿದೆ. ಈ ಬಾರಿ ಬಾಲಿವುಡ್ ಚಿತ್ರವನ್ನು ಬಿಟ್ಟು, ಟಾಲಿವುಡ್ ಚಿತ್ರ ಆಯ್ಕೆ ಮಾಡಿಕೊಂಡಿದ್ದಾರೆ ನರ್ಗಿಸ್.
ಕ್ರಿಶ್ ನಿರ್ದೇಶನದಲ್ಲಿ ಪವನ್ ಕಲ್ಯಾಣ್ ಅಭಿನಯದ ‘ಹರಿಹರ ವೀರಮಲ್ಲು’ ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದು, ಪವನ್ ಜತೆಗೆ ನಟಿಸುವುದಕ್ಕೆ ಎದುರು ನೋಡುತ್ತಿರುವುದಾಗಿ ನರ್ಗಿಸ್ ಹೇಳಿಕೊಂಡಿದ್ದಾರೆ. ಇದುವರೆಗೂ ನರ್ಗಿಸ್ ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದರೂ, ದಕ್ಷಿಣದ ಕಡೆ ಬಂದಿರಲಿಲ್ಲ. ಈಗ ‘ಹರಿಹರ ವೀರಮಲ್ಲು’ ಚಿತ್ರದ ಮೂಲಕ ಅದು ಸಾಧ್ಯವಾಗುತ್ತಿದೆ.
ಅಂದಹಾಗೆ, ಈ ಚಿತ್ರ ಎರಡನೆಯ ಲಾಕ್ಡೌನ್ಗೂ ಮುನ್ನವೇ ಪ್ರಾರಂಭವಾಗಿದ್ದು, 15 ದಿನಗಳ ಚಿತ್ರೀಕರಣವೂ ಆಗಿದೆ. ಆ ನಂತರ ಪವನ್ ಕಲ್ಯಾಣ್, ‘ಭೀಮ್ಲಾ ನಾಯಕ್’ನಲ್ಲಿ ತೊಡಗಿಸಿಕೊಂಡಿದ್ದರಿಂದ, ಈ ಚಿತ್ರ ನಿಂತಿತ್ತು. ಫೆಬ್ರವರಿಯಿಂದ ಚಿತ್ರೀಕರಣ ಪುನಃ ಪ್ರಾರಂಭವಾಗಲಿದ್ದು, ಈ ಭಾಗದ ಚಿತ್ರೀಕರಣದಲ್ಲಿ ನರ್ಗಿಸ್ ಸೇರಿಕೊಳ್ಳಲಿದ್ದಾರೆ. -ಏಜೆನ್ಸೀಸ್