ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಮೆಗಾ ಕುಟುಂಬದ ಕುಡಿ! ತಂದೆ ನಾಗಬಾಬು ಹೇಳಿದ್ದೇನು?

Published on
ಹೈದರಾಬಾದ್: ಇತ್ತೀಚೆಗೆ ತಾನೆ ಟಾಲಿವಡ್, ಬಾಲಿವುಡ್ ವಲಯದಲ್ಲಿ ಮಾದಕ ವಸ್ತುಗಳ ಕುರಿತಾದ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ, ಮತ್ತೆ ಟಾಲವುಡ್​ನಲ್ಲಿ ಮಾದಕ ವಸ್ತುಗಳ ಬಳಕೆಯ ಸುದ್ದಿ ಆತಂಕ ಹೆಚ್ಚಿಸಿದೆ. ಅಂದಹಾಗೆ, ಹೈದರಾಬಾದ್​ನಲ್ಲಿನ ಬಂಜಾರ ಹಿಲ್ಸ್​ನಲ್ಲಿ ಇರುವ ಒಂದು ಖಾಸಗಿ 5 ಸ್ಟಾರ್ ಹೋಟೆಲ್​ನಲ್ಲಿ ಶನಿವಾರ ಅಂದರೆ ಏ. 2 ರಂದು ಮಧ್ಯರಾತ್ರಿ ರೇವ್ ಪಾರ್ಟಿ ನಡೆಯುತ್ತಿದ್ದು, ಅದರಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳ ಮಕ್ಕಳು, ಸೆಲೆಬ್ರಿಟಿ ಕುಟುಂಬದ ಕುಡಿಗಳು ಇದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹಾಗಾಗಿ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಜಾರಾ ಹಿಲ್ಸ್ ಪೊಲೀಸರು ಅಂದಾಜು 148 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಅದರಲ್ಲಿ, ಮೆಗಾ ಕುಟುಂಬದ ಕುಡಿ ನಟಿ ನಿಹಾರಿಕಾ ಕೊನಿಡೆಲಾ ಮತ್ತು ಬಿಗ್​ ಬಾಸ್​ ತೆಲುಗು 3 ವಿನ್ನರ್​ ರಾಹುಲ್ ಸಿಪ್ಲಿಗಂಜ್ ಇದ್ದರು.
ದಾಳಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಪತ್ತೆ ಆಗಿವೆ. ಆ ಕಾರಣಕ್ಕಾಗಿ ನಿಹಾರಿಕಾ, ರಾಹುಲ್​ ಮುಂತಾದವರನ್ನು ವಶಕ್ಕೆ ಪಡೆಯಲಾಯಿತು. ಸದ್ಯ, ತನಿಖೆ ಜಾರಿಯಲ್ಲಿದೆ ಎಂಬ ಮಾಹಿತಿ ಸಿಕ್ಕಿದೆ. ಮೆಗಾ ಸ್ಟಾರ್ ನಟ ಚಿರಂಜೀವ ಅವರ ತಮ್ಮ, ನಟ ಕೆ.ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿದೆಲಾ ತೆಲುಗಿನ ಮೆಗಾ ಕುಟುಂಬದ ಮನೆ ಮಗಳು ಎಂಬ ಕಾರಣಕ್ಕೆ ಅವರ ಬಂಧನದ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ನೆಟ್ಟಿಗರು ಈ ವಿಷಯವನ್ನು ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ. ಈ ನಡುವೆ ಆ ಹೋಟೆಲ್​ನಲ್ಲಿ ದಾಳಿ ನಡೆದಾಗ ನಟಿ ಅಲ್ಲಿ ಏನು ಮಾಡುತ್ತಿದ್ದರು? ಎಂಬ ಬಗ್ಗೆ ಇನ್ನು ಮಾಹಿತಿ ಸಿಗಬೇಕಿದೆ. ಬಂಜಾರಾ ಹಿಲ್ಸ್ ಠಾಣೆಯ ಪೊಲೀಸರು ನಟಿ ನಿಹಾರಿಕಾ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಪಬ್ ಮಾಲೀಕರ ಮೇಲೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.
ಸದ್ಯ, ನಟಿ ನಿಹಾರಿಕಾ ಅವರು ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಿಂದ ಹೊರಗೆ ಬರುತ್ತಿರುವ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಜತೆಗೆ, ಈ ರೇವ್ ಪಾರ್ಟಿಯಲ್ಲಿ ಕೇವಲ ನಟಿ ನಿಹಾರಿಕಾ ಕೊನಿಡೆಲಾ ಮತ್ತು ಬಿಗ್​ ಬಾಸ್​ ತೆಲುಗು ವಿನ್ನರ್​ ರಾಹುಲ್ ಮಾತ್ರವಲ್ಲದೇ ಇನ್ನೂ ಅನೇಕ ಸೆಲೆಬ್ರಿಟಿಗಳ ಮಕ್ಕಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇಂದು (ಭಾನುವಾರ) ಮಧ್ಯಾಹ್ನ 12 ಗಂಟೆವರೆಗೂ ನಟಿ ನಿಹಾರಿಕಾ ಕೊನಿಡೆಲಾ ಅವರು ಬಂಜಾರ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಇದ್ದರು ಎನ್ನಲಾಗಿದೆ. ಬಳಿಕ ನಟಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರಂತೆ. ಪೊಲೀಸ್​ ಠಾಣೆಯಿಂದ ಬಂದ ನಟಿ ಮಾಧ್ಯಮದವರ ಜತೆಗೆ ಏನೂ ಮಾತಾಡಿಲ್ಲ. ರಿಯಾಕ್ಷನ್ ನೀಡಲು ನಟಿ ಒಪ್ಪಲಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ, ಈ ಸುದ್ದಿಗಳನ್ನು ಕುರಿತು ನಟಿ ನಿಹಾರಿಕಾ ಅವರ ತಂದೆ ನಟ ನಾಗ ಬಾಬು ಅವರು ಒಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. 
ಸಹಜವಾಗಿಯೇ, ಅವರ ಪುತ್ರಿಯ ಪರವಾಗಿ ನಟ, ''ಅನುಮತಿ ಇಲ್ಲದ ವೇಳೆಯಲ್ಲಿ ಪಬ್ ತೆರೆದಿದ್ದಕ್ಕಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಿಹಾರಿಕಾ ಏನೂ ತಪ್ಪು ಮಾಡಿಲ್ಲ ಎಂದು ನಮಗೆ ಪೊಲೀಸರು ಹೇಳಿದ್ದಾರೆ. ಆ ಸ್ಥಳದಲ್ಲಿ ಇದ್ದರು ಎಂಬ ಕಾರಣಕ್ಕೆ ನಿಹಾರಿಕಾರನ್ನು ವಶಕ್ಕೆ ಪಡೆಯಲಾಯಿತು. ಬೇರೆ ಯಾವುದೇ ರೀತಿಯ ಗಾಳಿ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಡಬಾರದು ಎನ್ನುವ ಉದ್ದೇಶದಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ'' ಎಂದು ತಿಳಿಸಿದ್ದಾರೆ. ನಟಿಯ ತಂದೆ ಕೊಟ್ಟ ರಿಯಾಕ್ಷನ್ ಹೀಗಿದ್ದರೂ, ರೇವ್ ಪಾರ್ಟಿಯಲ್ಲಿ ನಿಹಾರಿಕಾ ಅವರು ಡ್ರಗ್ಸ್  ತೊಡಗಿಕೊಂಡಿದ್ದರಾ? ಆ ಹೋಟೆಲ್​ನಲ್ಲಿ ಅವರು ಏನು ಮಾಡುತ್ತಿದ್ದರು?, ಎನ್ನುವ ಹಲವು ಪ್ರಶ್ನೆಗಳನ್ನು ಕುರಿತು ಇನ್ನೂ ತನಿಖೆ ನಡೆಯುತ್ತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net