

ಮುಂಬೈ: 'ಕಾಶ್ಮೀರ್ ಫೈಲ್ಸ್' ವಿರುದ್ಧ ಟೀಕೆ ಮಾಡಿದ್ದ ಇಸ್ರೇಲ್ ನಿರ್ಮಾಪಕ ನಡಾವ್ ಲ್ಯಾಪಿಡ್, ಈಗ ತಮ್ಮ ಮಾತುಗಳಿಗೆ ಕ್ಷಮೆ ಕೇಳಿದ್ದಾರೆ. ತಮಗೆ ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ (IFFI) ಸ್ಪರ್ಧಾತ್ಮಕ ಚಿತ್ರ ವಿಭಾಗದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವು ಪ್ರದರ್ಶನಗೊಂಡಿತ್ತು. ಚಿತ್ರೋತ್ಸವದ ಮುಕ್ತಾಯದ ಸಮಾರಂಭದಲ್ಲಿ ಮಾತನಾಡಿದ ಇಸ್ರೇಲಿ ನಿರ್ಮಾಪಕ ಮತ್ತು ಸ್ಪರ್ಧಾತ್ಮಕ ವಿಭಾಗದ ಜ್ಯೂರಿ ಮುಖ್ಯಸ್ಥರಾದ ನಾಡವ್ ಲ್ಯಾಪಿಡ್, ಚಿತ್ರ ಅಸಭ್ಯವಷ್ಟೇ ಅಲ್ಲ, ಬಹಳ ಕೆಟ್ಟದಾಗಿತ್ತು ಎಂದು ಹೇಳಿದ್ದರು.
ಲ್ಯಾಪಿಡ್ ಅವರ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ನಟ ಅನುಪಂ ಖೇರ್, ದರ್ಶನ್ ಕುಮಾರ್ ಮುಂತಾದವರು ಲ್ಯಾಪಿಡ್ ಅವರ ಮಾತುಗಳನ್ನು ಖಂಡಿಸಿದ್ದರು. ಇನ್ನಿ, ಭಾರತದಲ್ಲಿ ಇಸ್ರೇಲ್ ರಾಯಭಾರಿಯಾಗಿರುವ ನವೋರ್ ಗಿಲಾನ್, ಲ್ಯಾಪಿಡ್ಗೆ ಮೊದಲು ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಅಷ್ಟಾದರೂ ಲ್ಯಾಪಿಡ್ ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಈಗ ಅವರು ಅಂತಿಮವಾಗಿ ಕ್ಷಮೆ ಯಾಚಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಕಾಶ್ಮೀರಿ ಪಂಡಿತಾಗಾಗಲಿ ಅಥವಾ ನೊಂದವರ ಜನರ ಭಾವನೆಗಳನ್ನು ಅವಮಾನಿಸುವ ಉದ್ದೇಶವೂ ನನ್ನದಾಗಿರಲಿಲ್ಲ. ಆದರೂ ನನ್ನ ಹೇಳಿಕೆಯಿಂದ ಯಾರಿಗೆಲ್ಲ ನೋವಾಗಿದೆಯೋ ನಾನು ಸಂಪೂರ್ಣವಾಗಿ ಕ್ಷಮೆ ಯಾಚಿಸುತ್ತೇನೆ' ಎಂದಿದ್ದಾರೆ.
ಈ ವೇಳೆ ಇಸ್ರೇಲಿನ ಎಲ್ಲ ನಿರ್ದೇಶಕರು ಹಾಗೂ ಚಲನಚಿತ್ರೋತ್ಸವದ ತೀರ್ಪುಗಾರರ ಪರವಾಗಿಯೂ ಕ್ಷಮೆ ಕೇಳುತ್ತಿದ್ದೇನೆ ಎಂದು ಲಪಿಡ್ ಹೇಳಿದ್ದಾರೆ.