ಮರ್ಡರ್​ ಮಿಸ್ಟರಿ ಆ್ಯಪಲ್​ ಕಟ್​ ; ರಾಜ್​ಕಿಶೋರ್​ ಪುತ್ರಿ ಸಿಂಧು ಗೌಡ ನಿರ್ದೇಶನದ ಚಿತ್ರ

Apple_(132)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಟನೆಯಲ್ಲಿ ಮಾತ್ರವಲ್ಲ ನಿರ್ದೇಶನದಲ್ಲೂ ಹೆಣ್ಣುಮಕ್ಕಳು ಎತ್ತಿದ ಕೈ. ಕೆಲ ದಿನಗಳ ಹಿಂದಷ್ಟೇ ಸಿಂಧೂ ಶ್ರೀನಿವಾಸಮೂರ್ತಿ ನಿರ್ದೇಶನದ "ಆಚಾರ್​ ಆ್ಯಂಡ್​ ಕೋ' ರಿಲೀಸ್​ ಆಗಿತ್ತು. ಇದೀಗ ಮತ್ತೊಬ್ಬ ನಿರ್ದೇಶಕಿ ಹೊಸ ಚಿತ್ರದೊಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಹೆಸರು ಸಿಂಧು ಗೌಡ. 20ಕ್ಕೂ ಹೆಚ್ಚು ಸಿನಿಮಾಗಳಿಗೆ ಆ್ಯಕ್ಷನ್​&ಕಟ್​ ಹೇಳಿದ್ದ ನಿರ್ದೇಶಕ ರಾಜ್​ ಕಿಶೋರ್​ ಪುತ್ರಿ ಸಿಂಧು.

ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಸಿಂಧು, ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಇದೀಗ ಚಲನಚಿತ್ರ ನಿರ್ದೇಶಕಿಯಾಗಿದ್ದು, "ನಾನೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದೇನೆ. "ಆ್ಯಪಲ್​ ಕಟ್​' ಐವರು ಗೆಳೆಯರ ಸುತ್ತ ನಡೆಯುವ ಕಥೆ. ಮಾನವಶಾಸ್ತ್ರದ ಅಂಶವನ್ನೂ ಕಥೆಯಲ್ಲಿ ಸೇರಿಸಿದ್ದೇವೆ. ಆಸ್ಪತ್ರೆಯೊಂದರ ಅನುಮತಿ ಪಡೆದು ಶವವನ್ನೂ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ' ಎಂದು ಮಾಹಿತಿ ನೀಡಿದರು. ಕೆಲವು ಸಿನಿಮಾಗಳಲ್ಲಿ ನಟಿಸಿರುವ ಸೂರ್ಯ ಗೌಡ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. "ನಾನಿಲ್ಲಿ ಸತ್ಯ ಎಂಬ ಮಾನವಶಾಸ್ತ್ರ ಪ್ರೊೆಸರ್​ ಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರದಲ್ಲಿ ಕಥೆಯಷ್ಟೇ ತಾಯಿ-ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ' ಎಂದರು.

ನಾಯಕಿ ಅಶ್ವಿನಿ ಪೋಲೆಪಲ್ಲಿ, "ನಾನು ಮೂಲತಃ ಬಾಗೇಪಲ್ಲಿ ಹುಡುಗಿ. ಈ ಚಿತ್ರದಲ್ಲಿ ಸೈಕಾಲಜಿ ವಿದ್ಯಾರ್ಥಿನಿಯಾಗಿದ್ದೇನೆ' ಎಂದರು. ಉಳಿದಂತೆ ಅಪ್ಪಣ್ಣ, ಅಭಿಜಿತ್​, ಮೀನಾ, ಬಾಲು ರಾಜವಾಡಿ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ವೀರ್​ ಸಮರ್ಥ್​ ಸಂಗೀತ, ರಾಜೇಶ್​ ಛಾಯಾಗ್ರಹಣವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net