ಕೇಳಿದಾಗ ಇಲ್ಲ ಅನ್ನಲು ಮನಸ್ಸು ಒಪ್ಪಲಿಲ್ಲ: ಮನಕಲಕುವಂತಿದೆ ಶಕೀಲಾರ ಅಸಲಿ ಲವ್​ಸ್ಟೋರಿ

Shakeela
Published on

ಚೆನ್ನೈ: ನಟಿ ಶಕೀಲಾ ಬಗ್ಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. 1990ರ ದಶಕದ ಬಹುತೇಕರಿಗೆ ಶಕೀಲಾ ಪರಿಚಯ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಶಕೀಲಾ ಅವರು ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದರು. ಶಕೀಲಾ ಅವರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್​ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು. ಆದರೆ ದಿನ ಕಳೆದಂತೆ ಶಕೀಲಾ ಅವರ ಖ್ಯಾತಿ ಕೂಡ ಕ್ಷೀಣಿಸುತ್ತಾ ಬಂದಿತು. ಅಲ್ಲದೆ, ಶಕೀಲಾ ನಿರಂತರವಾಗಿ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸಿದ್ದರಿಂದ ಕೇರಳ ಸಿನಿಮಾ ಕ್ಷೇತ್ರದಿಂದಲೇ ಅವರನ್ನು ಬ್ಯಾನ್​ ಮಾಡಲಾಯಿತು. ಬಳಿಕ ಮಲಯಾಳಂ ಸಿನಿಮಾ ಇಂಡಸ್ಟ್ರಿ ಬಿಟ್ಟು ತಮಿಳುನಾಡಿಗೆ ಬಂದು ನೆಲೆಸಿದರು.

ತಮಿಳುನಾಡಿಗೆ ಬಂದು ನೆಲೆಸಿದ ಬಳಿಕ ನೀಲಿ ಸಿನಿಮಾಗಳ ನಟನೆಯಿಂದ ದೂರ ಉಳಿದ ಶಕೀಲಾ ತಮಗೆ ಸಿಕ್ಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದರು. ಜಯಂ, ಅಳಗಿಯ ತಮಿಳ್​ ಮಗನ್ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿಯೂ ಶಕೀಲಾ ನಟಿಸಿದ್ದಾರೆ. ಅಲ್ಲದೆ, ಟಿವಿ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದಾರೆ. ಕನ್ನಡದ ಬಿಗ್​ಬಾಸ್​ ಶೋನಲ್ಲೂ ಭಾಗಿಯಾಗಿದ್ದರು. ಸಾಕಷ್ಟು ಸಿನಿಮಾ ಅವಕಾಶಗಳು ಕೂಡ ಶಕೀಲಾರನ್ನು ಅರಸಿ ಬರುತ್ತಿವೆ.

ತಾಜಾ ಸಂಗತಿ ಏನೆಂದರೆ, ಶಕೀಲಾ ಅವರು ತಮ್ಮ ಲವ್​ಸ್ಟೋರಿಯನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಬಹುಕಾಲದ ಬಾಯ್​ಫ್ರೆಂಡ್​ ಬೇರೊಬ್ಬಳನ್ನು ಮದುವೆಯಾಗಿರುವ​ ಬಗ್ಗೆ ತಮಿಳಿನ ಆನ್​​ಲೈನ್​ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಾನೊಬ್ಬಳು ಮುಸ್ಲಿಂ ಮತ್ತು ನನ್ನ ಬಾಯ್​ಫ್ರೆಂಡ್​ ಹಿಂದು. ನಮ್ಮಿಬ್ಬರ ಪ್ರೀತಿಯ ವಿಚಾರವಾಗಿ ಕುಟುಂಬಗಳ ನಡುವೆ ತುಂಬಾ ಸಮಸ್ಯೆಗಳಿದ್ದವು. ನಮ್ಮ ಮದುವೆ ನಡೆದರೆ ಖಂಡಿತವಾಗಿ ಅಹಿತಕರ ಘಟನೆ ನಡೆಯುತ್ತದೆ ಎಂಬುದು ಮೊದಲೇ ತಿಳಿದಿತ್ತು. ಇದೇ ಸಂದರ್ಭದಲ್ಲಿ ಬೇರೊಬ್ಬಳನ್ನು ವರಿಸುವಂತೆ ನನ್ನ ಬಾಯ್​ಫ್ರೆಂಡ್​​ಗೆ ಕುಟುಂಬದಿಂದ ತುಂಬಾ ಒತ್ತಾಯವಿತ್ತು. ಈ ವಿಚಾರವನ್ನು ಆತ ನನಗೆ ತಿಳಿಸಿದಾಗ, ಬೇಡ ಅನ್ನಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ನಾನು ಬೇರೆ ಮದುವೆ ಮಾಡಿಕೊಳ್ಳುವಂತೆ ಸಮ್ಮತಿಸಿದೆ. ಏಕೆಂದರೆ, ನಾವು ಇಷ್ಟಪಡುವವರ ಮನಸ್ಸನ್ನು ನೋಯಿಸಲು ನನಗೆ ಇಷ್ಟವಿರಲಿಲ್ಲ. ಪ್ರತಿ ಸಮಯದಲ್ಲೂ ಆತ ಖುಷಿಯಾಗಿರಬೇಕೆಂದು ನಾನು ಬಯಸಿದೆ. ನಾನು ಆತನ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಬಹಿರಂಗಪಡಿಸಿದರೆ ತುಂಬಾ ತೊಂದರೆಗಳಾಗುತ್ತವೆ ಮತ್ತು ಆತನ ವೈವಾಹಿಕ ಜೀವನಕ್ಕೆ ಸಮಸ್ಯೆಯಾಗುತ್ತದೆ ಎಂದು ಶಕೀಲಾ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಶಕೀಲಾ ಅವರು ತನ್ನ ಮೊದಲ ಸಂಬಂಧದ ಬಗ್ಗೆಯೂ ಮಾತನಾಡಿದರು. 11ನೇ ವಯಸ್ಸಿನಲ್ಲಿ ಸಂಭವಿಸಿದ ಸಂಗತಿ ಇದು. ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ನನ್ನ ನೆರೆಹೊರೆಯವನಾಗಿದ್ದನು. ಅವನ ಹೆಸರು ಸುರೇಶ್ ರೆಡ್ಡಿ. ಇದು ಪ್ರೀತಿಯೋ? ಅಥವಾ ಇಲ್ಲವೋ? ನನಗೆ ಗೊತ್ತಿಲ್ಲ, ಆದರೆ ಅದು ಸಂಭವಿಸಿತು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net