More

    ರಾಮ ಮಂದಿರ ಉದ್ಘಾಟನೆ ದಿನ ಹತ್ತಿರ ಬರ್ತಿದ್ದಂತೆ ಹಿಂದುಪರ ಹೋರಾಟಗಾರರ ಬಂಧನ?

    ಹುಬ್ಬಳ್ಳಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಹಿಂದಿನ ದಿನ ಅಂದರೆ 1992ರ ಡಿ. 5ರಂದು ರಾತ್ರಿ ಹಿಂದು-ಮುಸ್ಲಿಮರ ಗಲಾಟೆ ನಡೆದಿತ್ತು. ಹಿಂದು ಕಾರ್ಯಕರ್ತರು ಹುಬ್ಬಳ್ಳಿ ಶಹರ ಠಾಣೆ ವ್ಯಾಪ್ತಿಯ ಮಳಿಗೆಯೊಂದಕ್ಕೆ ಬೆಂಕಿ ಹಚ್ಚಿದ್ದರು. ಪೊಲೀಸರು ಇಂಥ ಹಳೆಯ ಪ್ರಕರಣಗಳ ಜಾಡು ಹಿಡಿದು ಹೊರಟಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನ ಸನ್ನಿಹಿತವಾಗುತ್ತಿರುವ ವೇಳೆಯಲ್ಲಿಯೇ ಇಂಥ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ನಡೆಯುತ್ತಿರುವುದು ಸರ್ಕಾರದ ನಡೆಯನ್ನು ಪ್ರಶ್ನಿಸುವಂತೆ ಮಾಡಿದೆ.

    ರಾಮಮಂದಿರ ಹೋರಾಟದ ಸಂದರ್ಭ ಅಂದರೆ 1992ರಿಂದ 1996ರವರೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ 300 ಆರೋಪಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗುತ್ತಿದೆ. 1992ರ ಡಿ. 5ರಂದು ರಾತ್ರಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ರಾಜು ಧರ್ಮದಾಸ, ಶ್ರೀಕಾಂತ ಪೂಜಾರ, ಅಶೋಕ ಕಲಬುರಗಿ, ಷಣ್ಮುಖ ಕಾಟಿಗಾರ, ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿ ಸೇರಿ 13 ಜನರ ವಿರುದ್ಧ ಪ್ರಕರಣಗಳಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆಯೇ 8 ಜನರನ್ನು ಬಂಧಿಸಿದ್ದು, ಐವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಮೂವರು ಮೃತಪಟ್ಟಿದ್ದಾರೆ.

    30 ವರ್ಷಗಳ ಬಳಿಕ ಇದೀಗ ಅಂದರೆ, ಡಿ. 29ರಂದು ಶ್ರೀಕಾಂತ ಪೂಜಾರ ಅವರನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದವರಿಗೆ ಬಂಧನ ಭೀತಿ ಶುರುವಾಗಿದೆ. ಪೊಲೀಸ್ ಇಲಾಖೆಯಲ್ಲಿ ಲಾಂಗ್ ಪೆಂಡಿಂಗ್ ಕೇಸ್ (ಎಲ್‌ಪಿಸಿ) ಇಟ್ಟುಕೊಂಡಿದ್ದು, ಈಗ ಅವುಗಳನ್ನು ಹೊರ ತೆಗೆಯಲಾಗುತ್ತಿದೆ ಎಂಬ ಗುಮಾನಿಗಳೆದ್ದಿವೆ.

    ಇಷ್ಟು ದಿನ ಎಲ್ಲಿದ್ದರು?
    ಪೊಲೀಸರ ಮಾಹಿತಿ ಪ್ರಕಾರ ಹಳೆಯ ಕೇಸ್‌ನಲ್ಲಿ ದಾಖಲಾಗಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದರು ಎಂಬುದು. ಹಾಗಾದರೆ ಅವರ ಹೆಸರಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಪಡಿತರ ಚೀಟಿಗಳಿವೆ. ತಲೆಮರೆಸಿಕೊಂಡಿದ್ದರೆ, ಇವೆಲ್ಲವೂ ಹೇಗೆ ಹೊರಬಂದವು? ಹಾಗಾದರೆ ಇವರು ಇಷ್ಟು ದಿನ ಎಲ್ಲಿದ್ದರು? ತಮಗೆ ಬೇಕಿದ್ದಾಗ ಹೊರಬಿಡುವ, ಬೇಡವಾದಾಗ ನ್ಯಾಯಾಂಗ ವಶಕ್ಕೆ ನೀಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಅದೂ ಕಾಂಗ್ರೆಸ್ ಸರ್ಕಾರದ ಸೂಚನೆ ಮೇರೆಗೆ ನಡೆಯುತ್ತಿದೆ ಎಂಬ ಆರೋಪ ಹಿಂದು ಕಾರ್ಯಕರ್ತರದು.

    ನ್ಯಾಯಾಲಯದ ಸೂಚನೆ ಮೇರೆಗೆ ಶ್ರೀಕಾಂತ ಬಂಧನ
    ಹುಬ್ಬಳ್ಳಿಯಲ್ಲಿ 1992ರಲ್ಲಿ ಮಳಿಗೆಯೊಂದಕ್ಕೆ ಬೆಂಕಿ ಹಚ್ಚಿ, ಗಲಭೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀಕಾಂತ ಪೂಜಾರ ಎನ್ನುವಾತನನ್ನು ನ್ಯಾಯಾಲಯದ ಸೂಚನೆ ಮೇರೆಗೆ ಡಿ. 29ರಂದು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆಯ ಪ್ರಕರಣಗಳು ಬಾಕಿ ಉಳಿದಿದ್ದು, ಈಗಾಗಲೇ ಕೊಲೆ, ದೊಂಬಿ, ಗಾಂಜಾ, ಕಳ್ಳತನ ಸೇರಿ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ 36 ಜನರನ್ನು ಬಂಧಿಸಿದ್ದೇವೆ. 45 ವರ್ಷಗಳ ಹಿಂದೆ ನಡೆ ಪ್ರಕರಣಗಳಿದ್ದ ಆರೋಪಿಗಳನ್ನೂ ಕೂಡ ಬಂಧಿಸಿದ್ದೇವೆ. ಅದರಂತೆ ಈ ಪ್ರಕರಣವೂ ಒಂದು. ಇದು ಪೊಲೀಸ್ ಇಲಾಖೆಯಲ್ಲಿ ನಡೆಯುವ ನಿರಂತರ ಪ್ರಕ್ರಿಯೆ ಎಂದರು.

    ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೂ ಮುನ್ನಾ ದಿನ ಹುಬ್ಬಳ್ಳಿಯ ಶಹರ ಠಾಣೆ ವ್ಯಾಪ್ತಿಯಲ್ಲಿ ಗಲಾಟೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. 8 ಜನರನ್ನು ಬಂಧಿಸಿ, ಐವರನ್ನು ಬಿಡುಗಡೆಗೊಳಿಸಲಾಗಿದೆ. ಮೂವರು ಮೃತಪಟ್ಟಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೂ ಕೆಲವರ ಬಂಧನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಬಾಬರಿ ಮಸೀದಿ ಧ್ವಂಸದ ಗಲಭೆಗೂ ಈ ಪ್ರಕರಣದ ಆರೋಪಿಯ ಬಂಧನಕ್ಕೂ ಹೋಲಿಕೆ ಸಲ್ಲ. 30-40 ವರ್ಷದ ಹಿಂದೆ ನಡೆದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

    1992ರ ಡಿ. 5ರಂದು ಹುಬ್ಬಳ್ಳಿಯಲ್ಲಿ ಗಲಾಟೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ರಾಮ ಮಂದಿರದ ಉದ್ಘಾಟನೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಕರಸೇವಕರಲ್ಲಿ ಗೊಂದಲ ಮೂಡಿಸುವ, ಭೀತಿ ಹುಟ್ಟಿಸುವ ಕಾರ್ಯ ನಡೆಯುತ್ತಿದೆ. ಇವರು ಇದುವರೆಗೆ ಏಕೆ ತಲೆಮರೆಸಿಕೊಂಡಿರಲು ಸಾಧ್ಯ? ಇವರ ಹೆಸರಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ನಿರಂತರ ಚಾಲ್ತಿಯಲ್ಲಿವೆ. ಲಾಂಗ್ ಪೆಂಡಿಂಗ್ ಕೇಸ್ ಎಂದಿಟ್ಟುಕೊಂಡು ಈಗ ಪೊಲೀಸ್ ಇಲಾಖೆಯಿಂದ ಓಪನ್ ಮಾಡಿಸಲಾಗುತ್ತಿದೆ. ಇದು ಅಕ್ಷಮ್ಯ.

    | ಸಂಜೀವ ಬಡಸ್ಕರ್, ವಿಎಚ್‌ಪಿ ಮಹಾನಗರ ಜಿಲ್ಲಾಧ್ಯಕ್ಷ

    ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಅಲಂಕಾರಕ್ಕೆ ಈ ರಾಜ್ಯದಿಂದ ಬಂತು ವಿಶೇಷ ಹೂವುಗಳು

    5980 ಡೇಟಾ ಎಂಟ್ರಿ ಅಪರೇಟರ್ ನೇಮಕಕ್ಕೆ ತಾತ್ಕಾಲಿಕ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts