

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ದೇಗಲದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮಹಾಮಸ್ತಕಾಭಿಷೇಕಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಈಗಾಗಲೇ ತಮ್ಮಿಂದ ಆದ ಸಹಾಯ ಮಾಡುತ್ತಿದ್ದು, ಅನೇಕ ರೀತಿಯ ಕೊಡುಗೆಗಳನ್ನು ಅರ್ಪಿಸುತ್ತ ಬರುತ್ತಿದ್ದಾರೆ. ಇದೀಗ ಅದೇ ರೀತಿಯಲ್ಲಿ ಮಧ್ಯಪ್ರದೇಶದ ಭೋಪಾಲ್ನ ನರ್ಸರಿ ಮಾಲೀಕರೊಬ್ಬರು ವಿಶೇಷ ಹೂವುಗಳನ್ನು ರಾಮಮಂದಿರಕ್ಕೆ ಕಳಿಸಿಕೊಡಲು ಮುಂದಾಗಿದ್ದಾರೆ.
ಜನವರಿ 22ರಂದು ಶ್ರೀ ರಾಮನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿದ್ದು, ಈಗಾಗಲೇ ಉತ್ತರಪ್ರದೇಶ ಸರ್ಕಾರ ಈ ಕುರಿತಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬರುವ ಜನರಿಗೆ ತೊಂದರೆಯಾಗದಂತೆ, ಉಳಿದುಕೊಳ್ಳಲು ಕೊಠಡಿಗಳ ವ್ಯವಸ್ಥೆ ಸೇರಿದಂತೆ ಹಲವು ಸೌಕರ್ಯಗಳನ್ನು ಕೂಡ ಮಾಡಿದೆ.
ಇದೀಗ ಮಧ್ಯಪ್ರದೇಶದ ಭೋಪಾಲ್ನಿಂದ ಬೋಗನ್ವಿಲ್ಲಾ ಎಂಬ ವಿಶೇಷ ಹೂವುಗಳನ್ನು ರಾಮಮಂದಿರಕ್ಕೆ ರವಾನಿಸಲಾಗುವುದು ಎಂದು ನರ್ಸರಿ ಮಾಲೀಕರಾದ ರಾಮ್ಕುಮಾರ್ ರಾಥೋಡ್ ಹೇಳಿದ್ದು, ಈ ಹೂವುಗಳನ್ನು ಬಳಸಿ ಅಯೋಧ್ಯೆಯ ರಾಮಮಂದಿರದ ಆವರಣ ಸೇರಿದಂತೆ ದೇಗುಲದ ಕಾರಿಡಾರ್ ಅಲಂಕರಿಸಲು ಕಳುಹಿಸಲಾಗುವುದು ಎಂದು ಹೇಳಿದ್ದಾರೆ,(ಏಜೆನ್ಸೀಸ್).