More

    5980 ಡೇಟಾ ಎಂಟ್ರಿ ಅಪರೇಟರ್ ನೇಮಕಕ್ಕೆ ತಾತ್ಕಾಲಿಕ ತಡೆ

    ಬೆಂಗಳೂರು: ಪ್ರತಿ ಗ್ರಾ.ಪಂ.ಗೆ ಒಂದರಂತೆ ಸುಮಾರು 5980 ಡೇಟಾ ಎಂಟ್ರಿ ಅಪರೇಟರ್ ನೇರ ನೇಮಕಕ್ಕೆ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ.

    ನೇರ ನೇಮಕಾತಿ ಮೂಲಕ ಈ ಹುದ್ದೆಗೆ ನೇಮಕ ಮಾಡಲು ಎರಡು ತಿಂಗಳ ಹಿಂದೆ ಆದೇಶಿಸಲಾಗಿತ್ತು. ಆದರೆ, ಈ ನೇಮಕ ಆದೇಶ ಅವೈಜ್ಞಾನಿಕವಾಗಿತ್ತು. ಈ ಕುರಿತು ‘ವಿಜಯವಾಣಿ ’ಡಿ.25 ರಂದು ವಿಶೇಷ ವರದಿ ಪ್ರಕಟಿಸಿತ್ತು.

    ನೇಮಕ ಮಾಡಿಕೊಳ್ಳಲು ಉದ್ದೇಶಿಸಿರುವ ಡೇಟಾ ಎಂಟ್ರಿ ಅಪರೇಟರ್‌ಗಳಿಗೆ ವೇತನ ಪಾವತಿಸಲು ಗ್ರಾಮ ಪಂಚಾಯಿತಿಗಳಲ್ಲಿ ಆರ್ಥಿಕ ಭದ್ರತೆಯನ್ನು ಸ್ಪಷ್ಟಪಡಿಸಿರಲಿಲ್ಲ. ಅಲ್ಲದೆ, ಹಾಲಿ ಸೇವೆ ಸಲ್ಲಿಸುತ್ತಿರುವ 700-800 ನೌಕರರ ಸೇವೆ ಕಾಯಂಗೊಳಿಸುವ ಬಗ್ಗೆಯಾಗಲಿ, ಹೊಸ ನೇಮಕ ಸಂದರ್ಭದಲ್ಲಿ ಆದ್ಯತೆ ನೀಡುವ ಬಗ್ಗೆಯಾಗಲಿ ಯಾವುದೇ ಸ್ಪಷ್ಟತೆ ಆದೇಶದಲ್ಲಿ ಇರಲಿಲ್ಲ.

    ಯಾವುದೇ ನೇಮಕ ಮಾಡುವ ಮುನ್ನ ನೌಕರರಿಗೆ ವೇತನ ನಿಗದಿ ಮಾಡಲಾಗುತ್ತದೆ. ಸಂಪನ್ಮೂಲವನ್ನು ಸ್ಪಷ್ಟಪಡಿಸಲಾಗುತ್ತದೆ. ಬಜೆಟ್ ಬೆಂಬಲ ಖಚಿತಪಡಿಸಲಾಗುತ್ತದೆ. ಆದರೆ ಡೇಟಾ ಎಂಟ್ರಿ ಅಪರೇಟರ್ ನೇಮಕ ಸಂದರ್ಭದಲ್ಲಿ ವೇತನ ನಿಗದಿಪಡಿಸಿರಲಿಲ್ಲ. ಕನಿಷ್ಟ ವೇತನ ಎಂದಾದರೆ ಅದನ್ನೂ ಉಲ್ಲೇಖಿಸಿರಲಿಲ್ಲ. ಬದಲಾಗಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಂಗ್ರಹವಾಗುವ ಮೊತ್ತದಿಂದ ವೇತನ ಪಾವತಿಸುವಂತೆ ಸೂಚಿಸಲಾಗಿತ್ತು. ಆದರೆ, ಅಲ್ಲಿ ಸಂಗ್ರಹವಾಗುವ ಮೊಬಲುಗನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಹಾಗಾಗಿ ನೇಮಕ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಈಗ ನೇಮಕಕ್ಕೆ ತಾತ್ಕಾಲಿಕ ತಡೆ ನೀಡಿದೆ.

    ಅಲ್ಲದೆ, ಡೇಟಾ ಎಂಟ್ರಿ ಅಪರೇಟರ್‌ಗಳಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತರಲು ಪಂಚಾಯತ್ ರಾಜ್ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಾರಣ ಈಗಾಗಲೇ ನೇಮಕಕ್ಕೆ ನೀಡಿದ್ದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಸುತ್ತೋಲೆ ಹೊರಡಿಸಲಾಗಿದೆ.

    ಡೇಟಾ ಎಂಟ್ರಿ ಅಪರೇಟರ್ ನೇಮಕ ಆದೇಶಕ್ಕೆ ತಡೆ ನೀಡಿರುವುದು ಸರಿಯಾಗಿದೆ. ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಸರ್ಕಾರ ಕಾಯಂಗೊಳಿಸಲು ಪೂರಕ ಕ್ರಮ ಕೈಗೊಳ್ಳಬೇಕು. ವೇತನ ನಿಗದಿ ಹಾಗೂ ಬಜೆಟ್ ಬೆಂಬಲ ಸ್ಪಷ್ಟಪಡಿಸಬೇಕು.
    -ಭೀಮರೆಡ್ಡಿ ಪಾಟೀಲ್, ರಾಜ್ಯಾಧ್ಯಕ್ಷ, ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್ ನೌಕರರ ಸಂಘ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts