More

    545 ಎಸ್‌ಐ ನೇಮಕಾತಿ; ಕೆಎಸ್‌ಪಿಗೆ ಆಯ್ಕೆಪಟ್ಟಿ ಜವಾಬ್ದಾರಿ

    ಬೆಂಗಳೂರು: ಪಿಎಸ್‌ಐ 545 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಪೊಲೀಸ್ ನೇಮಕಾತಿ ವಿಭಾಗ ಆಯ್ಕೆ ಪಟ್ಟಿ ಪ್ರಕಟಿಸಲಿದೆ. 2021ರ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯಂತೆ ಆಯ್ಕೆಪಟ್ಟಿಯನ್ನು ಪ್ರಕಟ ಮಾಡಬೇಕು ಎಂದು ಅಭ್ಯರ್ಥಿಗಳ ಮನವಿ ಮಾಡುತ್ತಿದ್ದಾರೆ. ಅಧಿಸೂಚನೆಯಂತೆ ಮೆರಿಟ್ ಪಟ್ಟಿ ಬಿಡದಿದದ್ದಲ್ಲಿ ಮತ್ತೆ ಕೋರ್ಟ್‌ಗೆ ಹೋಗುವ ಸಾಧ್ಯತೆಗಳು ಹೆಚ್ಚಿದ್ದು, ಮತ್ತೆ ಪಿಎಸ್‌ಐ ನೇಮಕಾತಿಗೆ ವಿಳಂಬವಾಗುವ ಸಾಧ್ಯತೆಗಳಿವೆ.

    ನೇಮಕಾತಿಯಲ್ಲಿ ಹಗರಣದ ಬಳಿಕ ಹೈಕೋರ್ಟ್ ಆದೇಶದಂತೆ ಮರು ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ್ದು, ಅಂಕಪಟ್ಟಿಯನ್ನು ಸಹ ಪ್ರಕಟಿಸಿದೆ. ಅಭ್ಯರ್ಥಿಗಳು ಅಲ್ಲಿಸಿದ ಆಕ್ಷೇಪಣ ಪತ್ರಗಳನ್ನು ಪರಿಶೀಲನೆ ನಡೆಸಿದ ಕೆಇಎ, ಅಂತಿಕ ಅಂಕಪಟ್ಟಿಯನ್ನೂ ಪ್ರಕಟಿಸಿತ್ತು. ಇದೀಗ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸುವ ಜವಾಬ್ದಾರಿಯನ್ನು ಪೊಲೀಸ್ ನೇಮಕಾತಿ ವಿಭಾಗಕ್ಕೆ ವಹಿಸಿ ಅಂಕಪಟ್ಟಿ ಡೇಟಾವನ್ನು ಒಪ್ಪಿಸಿದೆ ಎಂದು ತಿಳಿದುಬಂದಿದೆ.
    ಪೊಲೀಸ್ ನೇಮಕಾತಿ ವಿಭಾಗ 2021ರ ಜನವರಿಯಲ್ಲಿ 545 ಎಸ್‌ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. 107 ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಾತಿ ಕಲ್ಪಿಸಲಾಗಿತ್ತು. ಮಿಕ್ಕುಳಿದ ಹುದ್ದೆಗಳನ್ನು ಕಲ್ಯಾಣ ಕರ್ನಾಟಕೇತರರಿಗೆ ನೀಡಲಾಗಿತ್ತು. ಇದರಲ್ಲಿ ಅಭ್ಯರ್ಥಿಗಳಿಗೆ ಮೀಸಲಾತಿ ಆಯ್ಕೆ ಮಾಡಿಕೊಳ್ಳುವ ಸ್ವತಂತ್ರ ನೀಡಲಾಗಿತ್ತು.

    ಇದೀಗ ಕಲ್ಯಾಣ ಕರ್ನಾಟಕ ಮೀಸಲಾತಿಯಲ್ಲಿ ಗೊಂದಲ ಉಂಟಾಗಿದೆ. ಮೆರಿಟ್ ಅಭ್ಯರ್ಥಿಗಳನ್ನು ಮಿಕ್ಕುಳಿದ ವೃಂದದಲ್ಲಿ ಲಭ್ಯ ಇರುವ ಹುದ್ದೆಗಳಿಗೆ ಪರಿಗಣಿಸಬೇಕು ಎನ್ನಲಾಗುತ್ತಿದೆ. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಧಿಸೂಚನೆಯಂತೆ ಆಯ್ಕೆ ಪಟ್ಟಿ ಪ್ರಕಟ ಮಾಡಬೇಕು ಎಂಬುದು ಬಹುತೇಕರ ಒತ್ತಾಯವಾಗಿತ್ತು.

    ಇದಲ್ಲದೆ, ಪೊಲೀಸ್ ನೇಮಕಾತಿ ವಿಭಾಗ ಅರ್ಜಿ ಆಹ್ವಾನ ಮಾಡಿದಾಗ ಸೇವಾನಿರತ ಅಭ್ಯರ್ಥಿಗಳು, ನೇರ ನೇಮಕಾತಿಗೆ ಮತ್ತು ಇನ್‌ಸರ್ವಿಸ್ ಆಯ್ಕೆ ಬಯಸಿ ಎರಡು ಅರ್ಜಿ ಸಲ್ಲಿಸಿದ್ದರು. ಮರು ಪರೀಕ್ಷೆ ಜವಾಬ್ದಾರಿ ವಹಿಸಿಕೊಂಡ ಕೆಇಎ ಅಧಿಕಾರಿಗಳು, ಒಂದು ಆಧಾರ್‌ಗೆ ಒಂದೇ ಹಾಲ್‌ಟಿಕೆಟ್ ಎಂಬ ನಿಮಯ ಜಾರಿಗೆ ತಂದು ಸೇವಾನಿರತ ಅಭ್ಯರ್ಥಿಗಳಿಗೆ ನೇರನೇಮಕಾತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರು. ಇದರಿಂದ ಸೇವಾನಿರತ ಅಭ್ಯರ್ಥಿಗಳು, ತೀವ್ರ ವಿರೋಧ ವ್ಯಕ್ತಪಡಿಸಿ ಇನ್‌ಸರ್ವಿಸ್ ಮೀಸಲಾತಿಗೆ ಹೋರಾಟ ನಡೆಸಿದರು.

    ಈ ಎಲ್ಲ ಗೊಂದಲಗಳನ್ನು ಬಗೆಹರಿಸಲು ಸಾಧ್ಯವಾಗದೆ ಕೆಇಎ ಅಧಿಕಾರಿಗಳು, ಆಯ್ಕೆಪಟ್ಟಿಯನ್ನು ಪ್ರಕಟಿಸುವ ಜವಾಬ್ದಾರಿಯನ್ನು ಗೃಹ ಇಲಾಖೆಗೆ ವಹಿಸಿದೆ. ಇದೀಗ ಪೊಲೀಸ್ ನೇಮಕಾತಿ ವಿಭಾಗ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಾಗ ಯಾವ ಮಾನದಂಡ ಅನುಸರಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಸಾವಿರಾರು ಪರೀಕ್ಷಾರ್ಥಿಗಳು ಅಧಿಸೂಚನೆಯಂತೆ ಆಯ್ಕೆಪಟ್ಟಿಯನ್ನು ಪ್ರಕಟ ಮಾಡಬೇಕೆಂದು ಮನವಿ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts