ನನ್ನ ಗಂಡನಿಗೆ ಅದೆಷ್ಟು ಜನ ಶಾಪ ಹಾಕಿದ್ದಾರೋ ಗೊತ್ತಿಲ್ಲ ...

Bhagyashri - Final
Published on

ಮುಂಬೈ: 30 ವರ್ಷಗಳ ಹಿಂದೆ ಬಿಡುಗಡೆಯಾದ 'ಮೈನೇ ಪ್ಯಾರ್​ ಕಿಯಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ಭಾಗ್ಯಶ್ರೀ. ಈ ಚಿತ್ರದ ನಂತರ ಅವರು ಬಾಲಿವುಡ್​ನ ಅತ್ಯಂತ ಬೇಡಿಕೆಯ ನಟಿಯಾದರು. ಆದರೆ, ಭಾಗ್ಯಶ್ರೀ ತಮ್ಮತ್ತ ಬಂದ ಎಲ್ಲಾ ಅವಕಾಶಗಳನ್ನು ಒಪ್ಪಲಿಲ್ಲ. ತಮ್ಮತ್ತ ಬಂದ ಅದೆಷ್ಟೋ ಅವಕಾಶಗಳನ್ನು ಅವರು ರಿಜೆಕ್ಟ್​ ಮಾಡಿದರು.

ಅದಕ್ಕೆ ಕಾರಣವೂ ಇದೆ. ಅಷ್ಟರಲ್ಲಿ ಹಿಮಾಲಯ ದಾಸಾನಿ ಜತೆಗೆ ಅವರ ಮದುವೆ ಫಿಕ್ಸ್​ ಆಗಿತ್ತು. ಹಿಮಾಲಯ ಅಲ್ಲದೆ ಬೇರೆ ಯಾವ ಹೀರೋ ಜತೆಗೂ ನಟಿಸುವುದಿಲ್ಲ ಎಂಬ ಕರಾರನ್ನು ಅವರು ಹಾಕಿದರು. ಕೆಲವರು ಹಿಮಾಲಯ ಮತ್ತು ಭಾಗ್ಯಶ್ರೀ ಅವರ ಜೋಡಿಯ ಚಿತ್ರಗಳನ್ನು ಮಾಡಿದರು. ಆದರೆ, 'ಮೈನೇ ಪ್ಯಾರ್​ ಕಿಯಾ' ಚಿತ್ರದಷ್ಟು ಯಾವ ಚಿತ್ರವೂ ಯಶಸ್ವಿಯಾಗಲಿಲ್ಲ. ಕೊನೆಗೆ, ಭಾಗ್ಯಶ್ರೀ ಅವರನ್ನು ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಸಂಪರ್ಕಿಸುವುದನ್ನೇ ಬಿಟ್ಟುಬಿಟ್ಟರು.

ಈಗ್ಯಾಕೆ ಈ ವಿಷಯ ಎಂದರೆ, 'ಮೈನೇ ಪ್ಯಾರ್​ ಕಿಯಾ' ಬಿಡುಗಡೆಯಾಗಿ ಇದೀಗ 31 ವರ್ಷಗಳಾಗಿವೆ. ಈ ಸಮಯದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೆರಿಯರ್​ನ ಉತ್ತುಂಗದಲ್ಲಿರುವಾಗಲೇ ಮದುವೆಯಾಗಿ ಚಿತ್ರರಂಗಕ್ಕೆ ಗುಡ್​ಬೈ ಹೇಳಿದ್ದರ ಕುರಿತಾಗಿ ಅವರು ಮಾತನಾಡಿದ್ದಾರೆ.

'ನನ್ನ ಗಂಡನಿಗೆ ಅದೆಷ್ಟು ಜನ ಶಾಪ ಹಾಕಿದ್ದಾರೋ ಗೊತ್ತಿಲ್ಲ. ಅದರಲ್ಲೂ ನಾನು ಮದುವೆಯಾದ ನಂತರ ಬಾಲಿವುಡ್​ಗೆ ಗುಡ್​ಬೈ ಹೇಳಿಬಿಟ್ಟೆ. ಈ ಸಂದರ್ಭದಲ್ಲಿ ನನ್ನ ಹಲವು ಅಭಿಮಾನಿಗಳು ಬೇಸರಗೊಂಡಿದ್ದರು. ಎಲ್ಲರೂ ಹಿಮಾಲಯ್​ಗೆ ಬಯ್ಯುತ್ತಿದ್ದರು. ಆ ಸಂದರ್ಭದಲ್ಲಿ ಅವರನ್ನು ಪ್ರೀತಿಸುತ್ತಿದ್ದುದು ನಾನೊಬ್ಬಳೇ ಇರಬೇಕು. ಆದರೆ, ನಾನು ಮದುವೆಯಾಗಿದ್ದಕ್ಕೂ ಕಾರಣವಿದೆ. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಮದುವೆಯಾಗುವುದಕ್ಕೆ ತೀರ್ಮಾನಿಸಿದ್ದೆವು. ಇಂತಹ ಸಂದರ್ಭದಲ್ಲಿ ಯಾರು ತಾನೆ, ತನ್ನ ಗರ್ಲ್​ಫ್ರೆಂಡ್​ ಬೇರೆಯವರ ಜೊತೆಗೆ ಹಾಡಿ-ಕುಣಿಯುವುದಕ್ಕೆ ಇಷ್ಟಪಡುತ್ತಾರೆ? ಮುಂದೆ ಸಮಸ್ಯೆ ಆಗಬಾರದು ಎಂಬ ದೃಷ್ಟಿಯಿಂದ ನಾನು ಚಿತ್ರರಂಗದಿಂದ ದೂರಾದೆ' ಎಂದು ಹೇಳಿಕೊಂಡಿದ್ದಾರೆ.

ಅದಾಗಿ ಎಷ್ಟೋ ವರ್ಷಗಳ ನಂತರ ಭಾಗ್ಯಶ್ರೀ ನಟನೆಗೆ ವಾಪಸ್ಸಾಗಿದ್ದು, ಇದೀಗ ಪ್ರಭಾಸ್​ ಅಭಿನಯದ 'ರಾಧೇ ಶ್ಯಾಮ್​' ಮತ್ತು ಕಂಗನಾ ರಣಾವತ್​ ಅಭಿನಯದ 'ಥಲೈವಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭಾಗ್ಯಶ್ರೀ ಮತ್ತು ಹಿಮಾಲಯ್​ ಅವರ ಮಗ ಅಭಿಮನ್ಯು ದಾಸಾನಿ ಸಹ ನಟನಾಗಿದ್ದು, ಕಳೆದ ವರ್ಷ ಬಿಡಗುಡೆಯಾಗಿದ್ದು, 'ಮರ್ದ್​ ಕೋ ದರ್ದ್​ ನಹೀ ಹೋತಾ' ಚಿತ್ರದಲ್ಲಿ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net