'ಮರ್ಡರ್​' ಸಿನಿಮಾ ವಿವಾದದ ಬೆನ್ನಲ್ಲೇ ಆರ್​ಜಿವಿ ಕೊಟ್ಟರು ಹೀಗೊಂದು ಸ್ಪಷ್ಟನೆ

case_filed_
Published on

ಮರ್ಡರ್​ ಸಿನಿಮಾದ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಆರ್​ಜಿವಿ ಪ್ರತಿಕ್ರಿಯಿಸಿದ್ದಾರೆ. 2018ರಲ್ಲಿ ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ ಮರ್ಯಾದೆ ಹತ್ಯೆ ಆಧಾರಿತ ಸಿನಿಮಾ ಪೋಸ್ಟರ್​ ಅನ್ನು ಇತ್ತಿಚೆಗಷ್ಟೇ ರಾಮ್​ ಗೋಪಾಲ್​ ವರ್ಮಾ ಬಿಡುಗಡೆ ಮಾಡಿದ್ದರು. ಆ ಪೋಸ್ಟರ್​ ಬಿಡುಗಡೆ ಬೆನ್ನಲ್ಲೇ ಪ್ರಣಯ್​ ತಂದೆ ಬಾಲಾಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು. ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಕೋರ್ಟ್ ಆದೇಶ ಹೊರಡಿಸಿತ್ತು. ಇದೀಗ ಈ ಬೆಳವಣಿಗೆಯ ಬಗ್ಗೆ ವರ್ಮಾ ಪ್ರತಿಕ್ರಿಯಿಸಿದ್ದಾರೆ.

‘ಮರ್ಡರ್​ ಸಿನಿಮಾ ಒಂದಷ್ಟು ನೈಜ ಘಟನೆ ಮತ್ತು ಒಂದಷ್ಟು ಘಟನೆಗಳಿಂದ ಸ್ಫೂರ್ತಿ ಪಡೆದು ಸಿದ್ಧವಾದ ಸಿನಿಮಾ ಆಗಿದೆಯೇ ಹೊರತು, ಸತ್ಯವನ್ನಲ್ಲ. ಅದೇ ರೀತಿ ಸಿನಿಮಾದಲ್ಲಿ ಯಾವುದೇ ಜಾತಿಯನ್ನು ಬಳಕೆ ಮಾಡಿಕೊಂಡಿಲ್ಲ’ ಎಂದು ಆರ್​ಜಿವಿ ಟ್ವಿಟ್​ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

ಹೌದು, ಆರ್​ಜಿವಿ ನಿರ್ದೇಶನದ ಮರ್ಡರ್​ ಚಿತ್ರಕ್ಕೆ ಪ್ರಣಯ್​ ತಂದೆ ಬಾಲಾಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿ, ಆರ್​ಜಿವಿ ಚಿತ್ರ ಪ್ರಣಯ್​ ಕೊಲೆ ಪ್ರಕರಣದ ಮೇಲೆ ಪರಿಣಾಮ ಬೀಳಲಿದೆ ಎಂದು ಪ್ರಣಯ್​ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ಬಾಲಾಸ್ವಾಮಿ ಅವರ ಅರ್ಜಿ ಪುರಸ್ಕರಿಸಿದ ನಲ್ಗೊಂಡ ವಿಶೇಷ ಪರಿಶಿಷ್ಟ ವರ್ಗ/ಪಂಗಡ ನ್ಯಾಯಾಲಯ, ಮಿರಿಯಾಲಗುಡ ಪೊಲೀಸ್​ ಠಾಣೆಗೆ ನಿರ್ದೇಶಕ ಆರ್​ಜಿವಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ಹೊರಡಿಸಿತ್ತು.

ಕಳೆದ ಅಪ್ಪಂದಿರ ದಿನದಿಂದು ಆರ್​ಜಿವಿ “ಮರ್ಡರ್​” ಹೆಸರಿನ ಮುಂದಿನ ಚಿತ್ರದ ಪೋಸ್ಟರ್​ ಅನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಬರೆದುಕೊಂಡಿದ್ದ ವರ್ಮಾ, ಅಮೃತಾ ರಾವ್​ ಹಾಗೂ ಮಾರುತಿ ರಾವ್​ ಜೀವನಾಧಾರಿತ ಚಿತ್ರವು ಒಂದು ಮನಕಲಕುವ ಕತೆಯಾಗಲಿದೆ. ಮಗಳನ್ನು ತುಂಬಾ ಪ್ರೀತಿಸುವ ತಂದೆಯ ಅಪಾಯಕಾರ ಸಾಹಸಗಳು ಪ್ರೇಕ್ಷಕರ ಹೃದಯವನ್ನು ತಟ್ಟಲಿದೆ ಎಂದು ಅಪ್ಪಂದಿರ ದಿನದಂದೇ ಪೋಸ್ಟರ್​ ಬಿಡುಗಡೆ ಮಾಡಿ, ಸ್ಯಾಡ್​ ಫಾದರ್ಸ್​ ಡೇ ಎಂದು ಬರೆದುಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net