

ಹೈದರಾಬಾದ್: ಒಂದು ಕಾಲಕ್ಕೆ ಐಟಂ ಡ್ಯಾನ್ಸ್ಗಳಿಗೆ ಸಖತ್ ಫೇಮಸ್ ಆಗಿದ್ದವರು ಮಾದಕ ನಟಿ ಮುಮೈತ್ ಖಾನ್. ಬರೀ ತಮಿಳು, ತೆಲುಗಲ್ಲದೆ, ಕನ್ನಡ, ಹಿಂದಿ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದ ಮುಮೈತ್ ಖಾನ್, ಇತ್ತೀಚಿನ ವರ್ಷಗಳಲ್ಲಿ ಎಲ್ಲಿದ್ದರೋ, ಏನು ಮಾಡುತ್ತಿದ್ದರೋ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.
ಹೀಗೆ ಅದೆಲ್ಲೋ ಮಾಯವಾಗಿದ್ದ ಮುಮೈತ್ ಇದೀಗ ಸುದ್ದಿಯಲ್ಲಿದ್ದಾರೆ. ಗುರುವಾರ ಬೆಳಿಗ್ಗೆ ಸೀದಾ ಹೈದರಾಬಾದ್ನ ಪಂಜಗುಟ್ಟ ಪೊಲೀಸ್ಟ್ ಸ್ಟೇಷನ್ಗೆ ಹೋದ ಮುಮೈತ್, ರಾಜು ಎಂಬ ಕ್ಯಾಬ್ ಡ್ರೈವರ್ ಮೇಲೆ ದೂರು ಕೊಟ್ಟುಬಂದಿದ್ದಾರೆ.
ದೂರು ಕೊಡುವಂತದ್ದೇನು ಮಾಡಿದ್ದರು ರಾಜು ಎಂಬ ಪ್ರಶ್ನೆ ನಿಮಗಾದರೂ ಬರಬಹುದು. ವಿಷಯವೇನೆಂದರೆ, ಮುಮೈತ್ ಖಾನ್ ಮೇಲೆ ರಾಜು ಸುಳ್ಳು ಆರೋಪಗಳನ್ನು ಹೊರಿಸಿದ್ದರಂತೆ. ಇದರಿಂದ ಬೇಸರಗೊಂಡಿರುವ ಮುಮೈತ್, ಸೀದಾ ರಾಜು ವಿರುದ್ಧ ಒಂದು ದೂರು ದಾಖಲಿಸಿ ಬಂದಿದ್ದಾರೆ.
ಇಷ್ಟಕ್ಕೂ ರಾಜುಗೂ ಮುಮೈತ್ಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವೇ. ಮುಮೈತ್ ಖಾನ್ ಇತ್ತೀಚೆಗೆ ಗೋವಾಗೆ ಹೋಗಿದ್ದಾರೆ. ಅದೂ ರಾಜು ಕಾರಿನಲ್ಲಿ. ವಾಪಸ್ಸು ಬಂದ ಮೇಲೆ, ಮುಮೈತ್ ವಿರುದ್ಧ ರಾಜು, ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಆರೋಪಗಳನ್ನು ಹೊರಿಸಿದ್ದಾರೆ, ತಮಗೆ ಮುಮೈತ್ 15 ಸಾವಿರ ಕೊಡಬೇಕಿತ್ತು, ಕೊಡದೇ ನಾಮ ಹಾಕಿಬಿಟ್ಟರು ಎಂದು ಬೇಸರಿಸಿಕೊಂಡಿದ್ದಾರೆ.
ಈ ವಿಷಯ ಮುಮೈತ್ ಕಿವಿಗೆ ಬೀಳುತ್ತಿದ್ದಂತೆಯೇ ಅವರು ಕೆಂಡಾಮಂಡಲರಾಗಿದ್ದಾರೆ. ಸೀದಾ ಹೋಗಿ ಪಂಜುಗುಟ್ಟ ಪೊಲೀಸ್ ಸ್ಟೇಶನ್ಗೆ ರಾಜು ವಿರುದ್ಧ ದೂರುಕೊಟ್ಟಿದ್ದಾರೆ. ದೂರು ಸ್ವೀಕರಿಸಿರುವುದನ್ನು ಒಪ್ಪಿಕೊಂಡಿರುವ ಪೊಲೀಸರು, ಈ ಕುರಿತು ತನಿಖೆ ನಡೆಸಿ, ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.