

ಮುಂಬೈ: ಶಾರೂಖ್ ಖಾನ್ ಅಭಿನಯದ 'ಪಠಾಣ್' ಚಿತ್ರದ 'ಬೇಷರಮ್ ರಂಗ್' ಹಾಡು ಬಿಡುಗಡೆಯಾಗಿದ್ದು ಸಾಕಷ್ಟು ವೈರಲ್ ಆಗಿದೆ. ಈ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ತೊಟ್ಟು ದೀಪಿಕಾ ಪಡುಕೋಣೆ ಮೈಮಾಟ ತೋರಿಸಿದ್ದಾರೆ. ಕೇಸರಿ ಬಣ್ಣದ ಬಿಕಿನಿ ತೋರಿಸಿರುವುದು ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೆಲವರು ಈ ಚಿತ್ರವನ್ನು ನಿಷೇಧಿಸುವುದಕ್ಕೆ ಹೊರಟಿದ್ದಾರೆ. ಅಷ್ಟೇ ಅಲ್ಲ, ‘Boycott Pathaan’ ಎನ್ನುವ ಅಭಿಯಾನ ಸಹ ಶುರು ಮಾಡಿದ್ದಾರೆ.
ಆದರೆ, ಚರ್ಚೆ ಆಗಬೇಕಿರುವುದು ಬಿಕಿನಿಯ ಬಣ್ಣವಲ್ಲ, ಬೇರೆ ವಿಷಯವೇ ಚರ್ಚೆ ಆಗಬೇಕು ಎಂದು ಹಿರಿಯ ನಟ ಹಾಗೂ ಮ 'ಮಹಾಭಾರತ' ಧಾರಾವಾಹಿಯ ಭೀಷ್ಮ ಪಾತ್ರಧಾರಿ ಮುಕೇಶ್ ಖನ್ನಾ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, 'ಬೇಷರಮ್ ದಿಲ್' ಹಾಡು ಅಶ್ಲೀಲವಾಗಿರುವುದಷ್ಟೇ ಅಲ್ಲ, ಬಹಳ ಪ್ರಚೋದನಕಾರಿಯಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಕೆಲವರಿಗೆ ತಲೆ ಕೆಟ್ಟಿದೆ ಎಂದನಿಸುತ್ತಿದೆ. ಇದು ಬಣ್ಣದ ಅಥವಾ ಧಾರ್ಮಿಕ ವಿಷಯವಲ್ಲ. ಆ ಹಾಡು ಅಶ್ಲೀಲವಷ್ಟೇ ಅಲ್ಲ, ಬಹಳ ಪ್ರಚೋದನಕಾರಿಯಾಗಿದೆ. ಅಂತಹ ಹಾಡನ್ನು ಹೇಗೆ ಬಿಡುವುದಕ್ಕೆ ಸಾಧ್ಯ? ಎಲ್ಲವನ್ನೂ ಬಿಟ್ಟು ಬಿಡೋಕೆ ನಾವು ಸ್ಪೇನ್ ಅಥವಾ ಸ್ವೀಡನ್ನಲ್ಲಿ ಇಲ್ಲ. ನಾವಿರೋದು ಭಾರತದಲ್ಲಿ. ಇಂಥದ್ದನ್ನೆಲ್ಲಾ ಸೆನ್ಸಾರ್ ಮಾಡುವಾಗ ಸ್ವಲ್ಪ ವಿವೇಚನೆ ಇರಬೇಕು. ಪ್ರಚೋದಿಸುವಂತಹ ಚಿತ್ರಗಳನ್ನು ಸೆನ್ಸಾರ್ ಬೋರ್ಡ್ ಪಾಸ್ ಮಾಡಬಾರದು. ಆ ಹಾಡು ಯುವಕರ ನಿದ್ದೆ ಗೆಡಿಸುವುದಷ್ಟೇ ಅಲ್ಲ, ಹಾದಿ ತಪ್ಪಿಸುತ್ತದೆ. ಆ ಹಾಡು ಓಟಿಟಿಗೆ ಮಾಡಿದ್ದಲ್ಲ, ಚಿತ್ರಮಂದಿರಕ್ಕೆ ಮಾಡಿದ್ದು? ಇದನ್ನು ಸೆನ್ಸಾರ್ನವರು ಬಿಡುವುದಕ್ಕೆ ಹೇಗೆ ಸಾಧ್ಯ?' ಎಂದು ಕಿಡಿಕಾರಿದ್ದಾರೆ.
'ಪಠಾಣ್' ಚಿತ್ರದಲ್ಲಿ ಶಾರೂಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮುಂತಾದವರು ನಟಿಸಿದ್ದು, ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಯಶ್ರಾಜ್ ಫಿಲಂಸ್ ನಿರ್ಮಿಸಿದೆ.