

| ರಾಜೇಂದ್ರ ಶಿಂಗನಮನೆ ಶಿರಸಿ
ಉತ್ತರ ಕನ್ನಡ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಾಜು 2500ಕ್ಕೂ ಹೆಚ್ಚು ಮನೆಗಳು ಇಂದಿಗೂ ವಿದ್ಯುತ್ ಮುಖ ಕಂಡಿಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶದ ಸಾವಿರಾರು ಜನರಿಗೆ ರಾತ್ರಿ ವೇಳೆ ಸೀಮೆ ಎಣ್ಣೆ ದೀಪವೇ ಆಸರೆಯಾಗಿದೆ.
ಗುಡ್ಡಗಳ ಮೇಲೆ ಮನೆ, ಚದುರಿದಂತಿರುವ ಗ್ರಾಮಗಳು, ಒಂಟಿ ಮನೆ, ವಿದ್ಯುತ್ ತಂತಿ ಎಳೆಯಲು ಅರಣ್ಯ ಇಲಾಖೆ ಅಡ್ಡಿ, ವಿದ್ಯುತ್ ಸಂಪರ್ಕರಹಿತರ ಗುರುತಿಸುವಿಕೆ ಮತ್ತು ಅರ್ಜಿ ವಿಲೇವಾರಿಯಲ್ಲಿನ ವಿಳಂಬದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಕೇಂದ್ರ ಸರ್ಕಾರದ ದೀನದಯಾಳ್, ಸೌಭಾಗ್ಯದಂಥ ಯೋಜನೆಯಡಿಯೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದು ಅಚ್ಚರಿ ಮೂಡಿಸಿದೆ.
ಬಹುತೇಕ ಸಂಪರ್ಕ ರಹಿತರು ಬಿಪಿಎಲ್ ಕಾರ್ಡ್ದಾರಾಗಿದ್ದಾರೆ. ‘ಯೋಜನೆ ಚಾಲ್ತಿಯಲ್ಲಿರುವಾಗ ಬಾರದ ಸಿಬ್ಬಂದಿ, ಯೋಜನೆ ಮುಕ್ತಾಯದ ನಂತರ ಬಂದು ಅರ್ಜಿ ನೀಡುವಂತೆ ಹೇಳುತ್ತಾರೆ. ಅರ್ಜಿ ನೀಡಿದರೂ ಸರಿಯಾಗಿ ಪರಿಶೀಲಿಸುತ್ತಿಲ್ಲ. ಹಲವು ವರ್ಷಗಳ ಹೋರಾಟದಿಂದ ಬೇಸತ್ತಿದ್ದೇವೆ’ ಎನ್ನುತ್ತಾರೆ ಸಂಪರ್ಕ ರಹಿತರು. ವಿಪರ್ಯಾಸವೆಂದರೆ, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಪರಿಗಣಿಸಲಾದ ಹಳ್ಳಿಗಳ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಆದರೆ, ಯಾವುದೇ ಹಳ್ಳಿಯ ಕನಿಷ್ಠ ಶೇ.10 ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದರೆ ಮತ್ತು ಸಾರ್ವಜನಿಕ ಸ್ಥಳಗಳಾದ ಶಾಲೆ, ಪಂಚಾಯಿತಿ, ಆರೋಗ್ಯ ಕೇಂದ್ರ ಹಾಗೂ ಸಮುದಾಯ ಕೇಂದ್ರಕ್ಕೆ ವಿದ್ಯುತ್ ಸಂಪರ್ಕವಿದ್ದರೆ ಅಂಥ ಗ್ರಾಮವನ್ನು ವಿದ್ಯುದೀಕರಣಗೊಂಡ ಗ್ರಾಮ ಎಂದು ಪರಿಗಣಿಸಲಾಗುತ್ತದೆ ಎಂಬುದು ಹೆಸ್ಕಾಂ ಹಿರಿಯ ಅಧಿಕಾರಿಗಳ ಮಾತಾಗಿದೆ.
ದೀನದಯಾಳ ಗ್ರಾಮೀಣ ವಿದ್ಯುದೀಕರಣ ಯೋಜನೆ ಜಾರಿಗೊಳ್ಳುವ ಮೊದಲು ಹೆಸ್ಕಾಂ ತಯಾರಿಸಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಹೊಂದಿರದ 9,671 ಮನೆಗಳಿದ್ದವು. ಯೋಜನೆಯಡಿ ಈ ಮನೆಗಳಿಗೆ ಸಂಪರ್ಕ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಯೋಜನೆ ಜಾರಿಗೊಳ್ಳುವ ಪೂರ್ವದಲ್ಲಿಯೇ 3,235 ಮನೆಗಳಲ್ಲಿ ಸ್ವಂತ ಖರ್ಚಿನಿಂದ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಇನ್ನುಳಿದ 6,436 ಮನೆಗಳಿಗೆ ಈ ಯೋಜನೆಯಡಿ ಹೆಸ್ಕಾಂನಿಂದ ವಿದ್ಯುತ್ ನೀಡಲಾಗಿದೆ ಎನ್ನುತ್ತದೆ ಸರ್ಕಾರಿ ದಾಖಲೆ. ಅಂದಮೇಲೆ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ರಹಿತ ಹಳ್ಳಿಗಳೇ ಇಲ್ಲ ಎಂದರ್ಥ. ಹೆಸ್ಕಾಂ ಆಧಾರಿತ ವರದಿ ಪ್ರಕಾರ, 2015ರ ನಂತರ ಜಿಲ್ಲೆಯಲ್ಲಿ ವಿದ್ಯುತ್ ಇಲ್ಲದ ಮನೆಯೇ ಇಲ್ಲ. ಅಸಲಿಗೆ ಜಿಲ್ಲೆಯಲ್ಲಿ ಇನ್ನೂ ಅದೆಷ್ಟೋ ಮನೆಗಳು ವಿದ್ಯುತ್ ಕಾಣದಿರುವುದು ವಾಸ್ತವ.
ಈಗಾಗಲೆ ದೀನದಯಾಳ ಗ್ರಾಮೀಣ ವಿದ್ಯುದೀಕರಣ ಯೋಜನೆ, ಸೌಭಾಗ್ಯ ಯೋಜನೆ ಯಡಿ ಹಲವೆಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಯೋಜನೆ ಚಾಲ್ತಿಯಲ್ಲಿರುವ ಸಂದರ್ಭ ಅರ್ಜಿ ಸಲ್ಲಿಸದ, ಪಂಚಾಯಿತಿ ವತಿಯಿಂದ ಸರಿಯಾದ ಸಮೀಕ್ಷೆಯಾಗದ ಕಾರಣಕ್ಕೆ ಕೆಲವೆಡೆ ವಿದ್ಯುತ್ ಸಂಪರ್ಕ ರಹಿತರಿದ್ದಾರೆ. ಪಿಡಿಒ ಮೂಲಕ ಮತ್ತೆ ಸಮೀಕ್ಷೆ ಮಾಡಿ ಫಲಾನುಭವಿಗಳ ಪಟ್ಟಿ ಪಡೆಯಲಾಗಿದೆ. ಆದರೆ, ಈಗ ಯಾವುದೇ ಯೋಜನೆ ಜಾರಿಯಲ್ಲಿಲ್ಲದ ಕಾರಣ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ದೀಪಕ ಕಾಮತ್ ಹೇಳುತ್ತಾರೆ. ಅರಣ್ಯ ವ್ಯಾಪ್ತಿಯಲ್ಲಿರುವ ಮನೆಗಳು, ಗುಡಿಸಲು ಗಳಿಗೆ ಸಂಪರ್ಕ ನೀಡಲು ಅವಕಾಶವಿಲ್ಲ. ಜಿಲ್ಲೆಯಲ್ಲಿ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕನಿಷ್ಠ -ಠಿ;6 ಕೋಟಿ ಬೇಕು ಎನ್ನುತ್ತಾರವರು.
ದೂರದ, ಅರಣ್ಯದೊಳಗಿನ ಮನೆ ಎಂಬ ಕಾರಣಕ್ಕೆ ಈವರೆಗೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಸರ್ಕಾರವು ವಿವಿಧ ಯೋಜನೆ ಜಾರಿಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಈ ಹಿಂದೆಯೇ ಆದೇಶಿಸಿದ್ದರೂ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ಇಲ್ಲ. ದಶಕಗಳಿಂದ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.| ಸದಾನಂದ ನಾಯ್ಕ ಹಿರೇಮನೆ ವಿದ್ಯುತ್ ಸಂಪರ್ಕ ರಹಿತರು