

ಚೆನ್ನೈ: ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರದಲ್ಲಿ ಮೋಹನ್ ಲಾಲ್ ನಟಿಸುತ್ತಾರೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಬಂದಿತ್ತು. ಆದರೆ, ಅದು ನಿಜವಾ? ಆ ಸಂದರ್ಭದಲ್ಲಿ ಸ್ಪಷ್ಟವಿರಲಿಲ್ಲ. ಚಿತ್ರದಲ್ಲೊಂದು ವಿಶೇಷ ಪಾತ್ರದ್ಲಿ ಲಾಲ್ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಬಂದಿದ್ದು, ಅದೀಗ ನಿಜವಾಗಿದೆ. ಚಿತ್ರದಲ್ಲಿನ ಮೋಹನ್ ಲಾಲ್ ಅವರ ಫಸ್ಟ್ಲುಕ್ ಇದೀಗ ಬಿಡುಗಡೆಯಾಗಿದೆ.
ಮೋಹನ್ ಲಾಲ್ ಅವರಿಗೆ ತಮಿಳು ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಕೆಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ, ರಜನಿಕಾಂತ್ ಜತೆಗೆ ಅವರು ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಈಗಾಗಲೇ ಒಂದು ದಿನದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇಂದು ಅವರ ಭಾಗದ ಚಿತ್ರೀಕರಣ ಪೂರ್ಣವಾಗಲಿದೆ ಎಂದು ಹೇಳಲಾಗುತ್ತಿದೆ. ಮೋಹನ್ ಲಾಲ್ ಅವರ ಪಾತ್ರದ ಫಸ್ಟ್ಲುಕ್ ಏನೋ ಬಿಡುಗಡೆಯಾಗಿದೆ. ಆದರೆ, ಅವರ ಪಾತ್ರವೇನು? ಈ ವಿಷಯವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ.
ಮೋಹನ್ ಲಾಲ್ ಅಲ್ಲದೆ, ಈ ಚಿತ್ರದಲ್ಲಿ ಕನ್ನಡದ ಶಿವರಾಜಕುಮಾರ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಲಾಲ್ರಂತೆಯೇ ಶಿವಣ್ಣ ಸಹ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕಳೆದ ತಿಂಗಳು ಅವರ ಭಾಗದ ಚಿತ್ರೀಕರಣವನ್ನು ಚೆನ್ನೈನಲ್ಲಿ ಮುಗಿಸಲಾಗಿದೆ.
'ಜೈಲರ್' ಚಿತ್ರವು ರಜನಿಕಾಂತ್ ಅಭಿನಯದ 169ನೇ ಚಿತ್ರವಾಗಿದ್ದು, ಅವರ ಜತೆಗೆ ರಮ್ಯಾ ಕೃಷ್ಣ, ಪ್ರಿಯಾಂಕಾ ಅರುಳ್ ಮೋಹನ್, ವಾಸಂತಿ ರವಿ, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆಯು ನಿರ್ಮಿಸುತ್ತಿದ್ದು, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. 'ಜೈಲರ್' ಚಿತ್ರವು ಏ. 14ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.