

ಮುಂಬೈ: ಚಿತ್ರೀಕರಣ ವೇಳೆ ಹೀರೋಗಳಿಗೆ ಸಣ್ಣಗಾಯವಾದರೂ ಶೂಟಿಂಗ್ ನಿಲ್ಲಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ವಾಡಿಕೆ. ಆದರೆ, ಹಿರಿಯ ನಟ ಮಿಥುನ್ ಚಕ್ರವರ್ತಿ ಮಾತ್ರ ಅನಾರೋಗ್ಯದ ನಡುವೆಯೂ ಚಿತ್ರೀಕರಣ ಮಾಡಿ, 'ದಿ ಕಾಶ್ಮೀರ್ ಫೈಲ್ಸ್' ಚಿತ್ರತಂಡದಿಂದ ಸೈ ಎನಿಸಿಕೊಂಡಿದ್ದಾರೆ.
ವಿಷಯ ಏನೆಂದರೆ, 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಚಿತ್ರೀಕರಣ ಮಸ್ಸೂರಿಯಲ್ಲಿ ಇತ್ತೀಚೆಗೆ ನಡೆಯುತ್ತಿತ್ತಂತೆ. ಅಲ್ಲಿ ಒಂದಿಷ್ಟು ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡುವುದಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ಧರಿಸಿದ್ದರಂತೆ. ಈ ಮಧ್ಯೆ, ಮಿಥುನ್ ಚಕ್ರವರ್ತಿಗೆ ಹೊಟ್ಟೆಯಲ್ಲಿ ಇನ್ಫೆಕ್ಷನ್ ಆಗಿ ಮೇಲೇಳುವುದಕ್ಕೆ ಸಾಧ್ಯವಾಗಲಿಲ್ಲವಂತೆ.
ಬೇರೆ ಯಾರಾದರೂ ಆಗಿದ್ದರೆ, ಚಿತ್ರೀಕರಣ ನಿಲ್ಲಿಸುತ್ತಿದ್ದರು. ಆದರೆ, ಮಿಥುನ್ ಮಾತ್ರ ಸ್ವಲ್ಪ ಸಮಯ ರೆಸ್ಟ್ ತೆಗೆದುಕೊಂಡು ಚಿತ್ರೀಕರಣಕ್ಕೆ ವಾಪಸ್ಸಾದರಂತೆ. ಹಲವು ವರ್ಷಗಳಿಂದ ಮಿಥುನ್ ಯಾವತ್ತೂ ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿರಲಿಲ್ಲವಂತೆ. ಈಗ ಇದ್ದಕ್ಕಿದ್ದಂತೆ ಹೀಗಾಗಿದ್ದು, ಅವರಿಗೂ ಸಾಕಷ್ಟು ಬೇಸರ ತಂದಿದೆ. 'ನನ್ನಿಂದ ನಿಮಗೆ ತೊಂದರೆಯಾಯ್ತು ...' ಎಂದು ಬೇಸರ ಮಾಡಿಕೊಳ್ಳುತ್ತಲೇ ಅವರು ತಮ್ಮ ಭಾಗದ ಚಿತ್ರೀಕರಣ ಮುಗಿಸಿದರಂತೆ.
ಇದನ್ನೂ ಓದಿ: ಟೈಟಲ್ ಏನೋ ಹಳೇದು, ಕಥೆ ಹೊಸದು ತಾನೇ?
ಮಿಥುನ್ ಅವರ ಕಮಿಟ್ಮೆಂಟ್ ನೋಡಿ ಇಡೀ ಚಿತ್ರತಂಡ ದಂಗಾಗಿದೆ. ಈ ಕುರಿತು ಮಾತನಾಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, 'ನಾನೂ ಕೆಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಆದರೆ, ಇಂದಿನ ತಲೆಮಾರಿನ ಯಾವ ನಟ ಸಹ ಅನಾರೋಗ್ಯದ ನಡುವೆಯೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದನ್ನು ನಾನು ನೋಡಲಿಲ್ಲ. ಅದೇ ಕಾರಣಕ್ಕೆ ಅವರು ಸೂಪರ್ಸ್ಟಾರ್ ಆಗಿದ್ದು' ಎನ್ನುತ್ತಾರೆ.