

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಟಿ ಮೇಘನಾ ರಾಜ್ ಇದುವರೆಗೆ 40 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 15, ಮಲಯಾಳಂನಲ್ಲಿ 20 ಸೇರಿ ತಮಿಳು, ತೆಲುಗು ಸಿನಿಮಾಗಳಲ್ಲೂ ಮಿಂಚಿದ್ದಾರೆ. ಆದರೆ, ಅವರು 2016ರ ‘ಹಾಲೆಲೂಯ’ ಚಿತ್ರದ ಬಳಿಕ ಮತ್ತೆ ಮಾಲಿವುಡ್‌ಗೆ ಹೋಗಿರಲಿಲ್ಲ. ಕನ್ನಡ ಸಿನಿಮಾಗಳಲ್ಲಿಯೇ ಹೆಚ್ಚು ಬಿಜಿಯಿದ್ದರು. ಇದೀಗ ಏಳು ವರ್ಷಗಳ ನಂತರ ‘ತತ್ಸಮ ತದ್ಭವ’ ಚಿತ್ರದ ಮೂಲಕ ಮತ್ತೆ ಮಲಯಾಳಂಗೆ ರೀ-ಎಂಟ್ರಿ ಕೊಡುತ್ತಿದ್ದಾರೆ ಮೇಘನಾ.
ಹೌದು, ವಿಶಾಲ್ ಆತ್ರೇಯ ನಿರ್ದೇಶನದ, ಪನ್ನಗಾಭರಣ ನಿರ್ಮಾಣದ ‘ತತ್ಸಮ ತದ್ಭವ’ ಚಿತ್ರ ಕನ್ನಡದ ಜತೆ ಮಲಯಾಳಂನಲ್ಲೂ ತೆರೆಗೆ ಬರಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ಪ್ರಕರಣವೊಂದರ ವಿಚಾರಣೆಯ ಸುತ್ತ ಕಥೆ ಸಾಗುತ್ತದೆ. ಈಗಾಗಲೇ ಟ್ರೇಲರ್ ಜಾಲತಾಣದಲ್ಲಿ ವೈರಲ್ ಆಗಿದೆ. ‘ಸ್ಯಾಂಡಲ್‌ವುಡ್‌ಗೆ ಇದು ಹೊಸ ಬಗೆಯ ಚಿತ್ರ. ಪ್ರತಿ 10ರಿಂದ 15 ನಿಮಿಷಕ್ಕೆ ಒಂದೊಂದು ಪಾತ್ರ ಸೇರಿಕೊಳ್ಳುತ್ತಾ ಹೋಗುತ್ತದೆ. ಕೆಲವೊಮ್ಮೆ ಮುಂದೇನಾಗುತ್ತೆ ಅಂತ ನಿರ್ಧರಿಸಿಬಿಡಬಹುದು. ಆದರೆ, ಅಲ್ಲಿ ಬೇರೆಯದೇ ಟ್ವಿಸ್ಟ್ ಇರುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲದಕ್ಕೂ ಉತ್ತರ ನೀಡಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ವಿಶಾಲ್ ಆತ್ರೇಯ.
ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತವಿರಲಿದೆ. ಮೇಘನಾ ರಾಜ್ ಜತೆ ಪ್ರಜ್ವಲ್ ದೇವರಾಜ್, ಅರವಿಂದ್, ಮಹತಿ ಭಟ್, ಬಾಲಾಜಿ ಮನೋಹರ್, ಟಿ.ಎಸ್. ನಾಗಾಭರಣ, ಗಿರಿಜಾ ಲೋಕೇಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸಿನಿಮಾ ಇದೇ ತಿಂಗಳ 15ರಂದು ರಿಲೀಸ್ ಆಗಲಿದೆ.