2019ರ ಜೂನ್​ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್​ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು...

Chiru sarja 14 June 2020
Published on

ಹೊತ್ತುಗೊತ್ತು ಸರಿ ಇರುವುದಿಲ್ಲ, ಕೆಟ್ಟದ್ದನ್ನು ಆಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಸಿನಿಮಾ, ನಾಟಕ ಕಲಾವಿದರಿಗೆ ಇದೆಲ್ಲ ಎಲ್ಲಿ? ಎಷ್ಟೋ ಚಲನಚಿತ್ರಗಳಲ್ಲಿ ಯಾವ್ಯಾವುದೋ ಪಾತ್ರ ನಿಭಾಯಿಸುತ್ತಾರೆ. ಸಾವು, ಅಳು, ನೋವು, ನಗು ಹೀಗೆ..ಜೀವನದ ಅದೆಷ್ಟೋ ಆಗುಹೋಗುಗಳಿಗೆ ಸಂಬಂಧಪಟ್ಟ ಪಾತ್ರಕ್ಕೆ ಜೀವ ತುಂಬುತ್ತಾರೆ.

ಆದರೆ ಕೆಲವು ಕಲಾವಿದರು ಅಭಿನಯ ಮಾಡಿದ್ದ ಪಾತ್ರಗಳಿಗೂ, ಅವರ ಜೀವನಕ್ಕೂ ಕಾಕತಾಳೀಯವೆಂಬಂತೆ ಒಮ್ಮೊಮ್ಮೆ ಹೊಂದಾಣಿಕೆಯಾಗಿಬಿಡುತ್ತದೆ. ಸದ್ಯ ಪ್ರೀತಿಯ ಗಂಡನನ್ನು ಕಳೆದುಕೊಂಡ ಮೇಘನಾ ರಾಜ್​ ಅವರ ಸ್ಥಿತಿ ಹಾಗೇ ಇದೆ.

ಚಿರಂಜೀವಿ ಸರ್ಜಾ ಮೃತಪಟ್ಟಿದ್ದು ಜೂ.7ರಂದು. ಸರಿಯಾಗಿ ಒಂದು ವರ್ಷದ ಹಿಂದೆ. ಅಂದರೆ 2019ರ ಜೂನ್​ 7ರಂದು ನಟಿ ಮೇಘನಾ ರಾಜ್​ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದು ಅವರ 'ಒಂಟಿ' ಸಿನಿಮಾದ ಪೋಸ್ಟರ್​. 2019ರ ಜೂ.11ರಂದು ಒಂಟಿ ಸಿನಿಮಾದ ಟ್ರೇಲರ್​ ಬಿಡುಗಡೆಯಾಗುವುದಿತ್ತು. ಅದರ ಪ್ರಮೋಶನ್​ಗಾಗಿ ತಮ್ಮ ಇನ್ಸ್ಟಾದಲ್ಲಿ ಅದರ ಫೋಟೋ ಹಾಕಿದ್ದರು. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…

ಮೇಘನಾ ರಾಜ್​ ಅವರು ಚಿರಂಜೀವಿಯವರನ್ನು ಮದುವೆಯಾದ ನಂತರ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆರ್ಯ ಇದರಲ್ಲಿ ಹೀರೋ. ಪಕ್ಕಾ ಮಾಸ್​ ಚಿತ್ರವಾಗಿದ್ದ ಒಂಟಿಯಲ್ಲಿ ಮೇಘನಾ ಕಾಲೇಜು ಹುಡುಗಿಯ ಪಾತ್ರದಲ್ಲಿ ಅಭಿನಯ ಮಾಡಿದ್ದರು. ಅದರಲ್ಲಿ ನಾಯಕನ ಹೆಸರೇ ಒಂಟಿ. ಆದರೂ ಈ ಶಬ್ದ ಏಕಾಂಗಿ ಎಂಬ ಅರ್ಥ ಕೊಡುತ್ತದೆ. ಜತೆ ಇಲ್ಲದವರಿಗೆ ಒಂಟಿ ಎಂದು ಕರೆಯುವುದೂ ಇದೆ.

ಆದರೆ ಚಿರು ನಿಧನರಾಗಲು ಸರಿಯಾಗಿ ಒಂದು ವರ್ಷದ ಹಿಂದೆ ಅದೇ ದಿನಾಂಕದಂದು 'ಒಂಟಿ' ಎಂದು ದೊಡ್ಡದಾಗಿ ಬರೆದಿದ್ದ ಫೋಟೋವನ್ನು ಶೇರ್​ ಮಾಡಿದ್ದು ನಿಜಕ್ಕೂ ಕಾಕತಾಳೀಯ. ಇದೀಗ ಮತ್ತೆ ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತುಕತೆ ಶುರುವಾಗಿದೆ. ಮೇಘನಾ ರಾಜ್​ ತಮ್ಮ ಪ್ರೀತಿಯನ್ನು ಕಳೆದುಕೊಂಡು ನಿಜಕ್ಕೂ ಒಂಟಿಯಾದರು ಎಂದು ಅನೇಕರು ನೋವು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಅಳಿಯನ ಸಾವಿನ ಬೆನ್ನಲ್ಲೇ ಫೇಸ್​ಬುಕ್​ ಕವರ್​, ಪ್ರೊಫೈಲ್​ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್​ ಸರ್ಜಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net