

ಬೆಂಗಳೂರು: ಮಾದಕ ವ್ಯಸನಕ್ಕೆ ಸಂಬಂಧಪಟ್ಟಂತೆ ಚಿರು ಸರ್ಜಾ ಹೆಸರು ಕೇಳಿಬಂದಿದ್ದು ತೀವ್ರ ದುಃಖ ತಂದಿದೆ..ಇಂದ್ರಜಿತ್ ಲಂಕೇಶ್ ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು ಎಂದು ಚಿರು ಪತ್ನಿ ಮೇಘನಾ ರಾಜ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.
'ನನ್ನ ಪತಿ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲ ಇದ್ದಕ್ಕಿದ್ದಂತೆ ಅಗಲಿ ಇನ್ನೂ ಮೂರು ತಿಂಗಳುಗಳೂ ಕಳೆದಿಲ್ಲ. ಇಡೀ ನಮ್ಮ ಸಂಸಾರ ಆ ದುಃಖದಿಂದ ಹೊರಬರುವ ಮೊದಲೇ ಆಧಾರರಹಿತವಾದ ಆರೋಪಗಳನ್ನು ನನ್ನ ದಿವಂಗತ ಪತಿಯ ಮೇಲೆ ಇಂದ್ರಜಿತ್ ಲಂಕೇಶ್ ಅವರು ಹೊರಿಸುತ್ತಿದ್ದಾರೆ. ನನ್ನ ದಿವಂಗತ ಪತಿಯ ಬಗ್ಗೆ, ಅವರ ಪ್ರಚೋದಿತ ಅಕಾಲಿಕ ಮರಣದ ಬಗೆಗಿನ ಅವಹೇಳನಕಾರಿ ಆಪಾದನೆಗಳಿಂದ ನನಗೆ ಮತ್ತು ನನ್ನ ಇಡೀ ಕುಟುಂಬದವರಿಗೆ ಮಾನಸಿಕವಾಗಿ ಅತೀವವಾದ ವೇದನೆ ಉಂಟಾಗಿದೆ. ಗರ್ಭವತಿಯಾಗಿರುವ ನನ್ನನ್ನು ಈ ರೀತಿ ಮಾನಸಿಕ ತೊಳಲಾಟಕ್ಕೆ ತಳ್ಳುವುದು ಅತೀವವಾದ ಅಮಾನವೀಯ ಕೃತ್ಯ. ವಾರ್ತಾ ದೃಶ್ಯ ಮಾಧ್ಯಮಗಳು ಯಾವುದೇ ರೀತಿಯ ಆಧಾರ ಹೊಂದಿರದೆ ಇದ್ದರೂ ಮಾದಕ ವಸ್ತುಗಳ ಸುದ್ದಿಗಳ ಜತೆಜತೆಗೆ ಚಿರಂಜೀವಿ ಸರ್ಜಾರ ಫೋಟೋಗಳನ್ನು ಬಳಸುತ್ತಿದ್ದಾರೆ. ಈ ರೀತಿಯಾದ ನಿರಾಧಾರವಾದ ಅವಹೇಳನಕಾರಿ ಸುದ್ದಿಗಳಿಂದ ನಮ್ಮನ್ನಗಲಿದ ಆತ್ಮವೊಂದರ ನೆನಪಿಗೂ ಮಸಿ ಬಳಿಯಲಾಗುತ್ತಿದೆ. ಇವೆಲ್ಲವರೂ ಇಂದ್ರಜಿತ್ ಲಂಕೇಶ್ ಅವರ ಬೇಜವಾಬ್ದಾರಿತನದಿಂದ ನಡೆದಿರುವುದು. ನನಗೆ ಮಾಧ್ಯಮಗಳ ಬಗ್ಗೆ ಅಪಾರ ಗೌರವ ಇದೆ. ಆದರೆ ಈ ಪ್ರಕರಣವನ್ನು ಅವರು ಪರಿಗಣಿಸಿದ ರೀತಿ ಮತ್ತು ನನ್ನ ದಿವಂಗತ ಪತಿ ಹೆಸರು, ಫೋಟೋವನ್ನು ಬಳಸಿಕೊಂಡ ರೀತಿ, ಒಂದಂಶದ ಆಧಾರ, ಮಾಹಿತಿಯನ್ನು ಹೊಂದದೆ ವರದಿ ಮಾಡುತ್ತಿರುವುದರಿಂದ ನಿರಾಶೆಯಾಗಿದೆ. ಇದನ್ನೂ ಓದಿ: ಡ್ರಗ್ ಮಾಫಿಯಾ ಮಟ್ಟ ಹಾಕಿ ; ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ
ಇಂದ್ರಜಿತ್ ಲಂಕೇಶ್ ಅವರ ಈ ರೀತಿಯ ನಡವಳಿಕೆಯಿಂದ ನನಗೆ ಉಂಟಾಗಿರುವ ಮಾನಸಿಕ ವೇದನೆಯನ್ನು ತೋಡಿಕೊಳ್ಳಲು ಯಾವುದೇ ಶಬ್ದಗಳೂ ಸಿಗದಂತಾಗಿದೆ. ನನಗೆ ಮತ್ತು ನನ್ನ ಕುಟುಂಬದವರಿಗೆ ಈಗ ಬೇಕಾಗಿರುವುದು ಇಂದ್ರಜಿತ್ ಲಂಕೇಶ್ ಅವರ ಬೇಷರತ್ ಆದ ಸಾರ್ವಜನಿಕ ಕ್ಷಮೆ. ಈ ಸಂದರ್ಭದಲ್ಲಿ ಇಂದ್ರಜಿತ್ ಅವರು ಕ್ಷಮೆ ಕೇಳುವ ಸಭ್ಯತೆಯನ್ನು ಪ್ರದರ್ಶಿಸುತ್ತಾರೆ ಎಂದು ನಂಬಿದ್ದೇನೆ. ಹಾಗೇ ಸುದ್ದಿ ಮಾಧ್ಯಮಗಳು ನನ್ನ ದಿವಂಗತ ಪತಿಯ ಫೋಟೋ, ಹೆಸರುಗಳನ್ನು ಮಾದಕವಸ್ತುಗಳ ವರದಿಯ ಜತೆ ಬಿಂಬಿಸುವುದನ್ನು ನಿಲ್ಲಿಸಬೇಕು. ಸುದ್ದಿಮಾಧ್ಯಮಗಳು ತಮ್ಮ ಆತ್ಮಸಾಕ್ಷಿಯ ಮೊರೆ ಹೋಗಬೇಕು..ಓರ್ವ ತನ್ನನ್ನು ತಾನು ಸಮರ್ಥಿಸಿಕೊಳ್ಳಲಾರದ, ಇಹಲೋಕವನ್ನೇ ತ್ಯಜಿಸಿಹೋಗಿರುವವನ ತೇಜೋವಧೆ ಮಾಡುವುದನ್ನು ನಿಲ್ಲಿಸುತ್ತವೆ ಎಂದು ಆಶಿಸುತ್ತೇನೆ' ಎಂದು ಮೇಘನಾ ರಾಜ್ ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಗಾಂಜಾ ದಂಧೆಕೋರರ ಬೆನ್ನುಬಿದ್ದ ಪೊಲೀಸರು, ವಿಶೇಷ ಕಾರ್ಯಾಚರಣೆಯಲ್ಲಿ 16 ಕೆ.ಜಿ.ಗಾಂಜಾ ವಶ
ಇಂದು ಸುದ್ದಿಗೋಷ್ಠಿ ನಡೆಸಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಕೆ. ವಿ. ಚಂದ್ರಶೇಖರ್ ಈ ಪತ್ರವನ್ನು ಸಂಪೂರ್ಣವಾಗಿ ಓದಿದ್ದಾರೆ. ಮೇಘನಾರಾಜ್ ಅವರು 3ನೇ ತಾರೀಖಿಗೆ ಪತ್ರ ಬರೆದಿದ್ದಾರೆ. ಪತ್ರದ ವಿಷಯವನ್ನು ಇಂದ್ರಜಿತ್ ಗಮನಕ್ಕೆ ತರುತ್ತೇವೆ. ಅವರಿಗೆ ಪತ್ರ ಬರೆಯುತ್ತೇವೆ. ಮಾಧ್ಯಮಗಳಿಗೂ ಕೊಡುತ್ತೇವೆ. ಪತಿಯನ್ನು ಕಳೆದುಕೊಂಡ ಗರ್ಭಿಣಿ ಹೆಣ್ಣುಮಗಳ ನೋವಿಗೆ ನಾವೆಲ್ಲ ಸಮಾಧಾನ ಮಾಡಬೇಕು ಎಂದು ಹೇಳಿದ್ದಾರೆ.
ನಮ್ಮಲ್ಲೂ ಅಕ್ಕತಂಗಿಯರು ಇದ್ದಾರೆ. ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಇಂದ್ರಜಿತ್ ಅವರ ಕುಟುಂಬದ ಕ್ಷಮೆ ಕೇಳಿ, ಸಾಂತ್ವ ಹೇಳುವ ವ್ಯವಸ್ಥೆ ಮಾಡಲಾಗುವುದು ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗುತ್ತೇನೆ ಎಂದವನ ನಂಬಿ ಕೆಟ್ಟ ವಿಚ್ಛೇದಿತ ಮಹಿಳೆ; ರಾಜ್ಯದಲ್ಲೂ ದಾಖಲಾಗಿವೆ 2 ಕೇಸ್
ಈ ಹಿಂದೆ ಸ್ಯಾಂಡಲ್ವುಡ್ ಡ್ರಗ್ ಜಾಲದ ಬಗ್ಗೆ ಮಾತನಾಡಿದ್ದ ಇಂದ್ರಜಿತ್ ಲಂಕೇಶ್ ಅವರು, ಇತ್ತೀಚೆಗೆ ಮೃತಪಟ್ಟ ಯುವನಟನ ಮರಣೋತ್ತರ ಪರೀಕ್ಷೆಯನ್ನು ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದರು. ಅವರು ಚಿರಂಜೀವಿ ಹೆಸರೇನೂ ಹೇಳಿರಲಿಲ್ಲ. ಆದರೂ ಚಿರು ಹೆಸರು ತಳುಕು ಹಾಕಿಕೊಂಡಿತ್ತು. ಈಗಾಗಲೇ ಒಮ್ಮೆ ಇಂದ್ರಜಿತ್ ಕ್ಷಮೆ ಕೇಳಿದ್ದಾರೆ.