ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ?: ಸ್ಯಾಂಡಲ್ವುಡ್​ ರಹಸ್ಯ ಬಿಚ್ಚಿಟ್ಟ ಇಂದ್ರಜಿತ್​!

Lankesh
Published on

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಇರುವ ಮಾದಕ ಜಾಲದ ನಂಟಿನ ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿಗಳನ್ನು ನಟ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್ ಅವರು​ ಬಿಚ್ಚಿಟ್ಟಿದ್ದಾರೆ.

ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿರುವ ಅವರು ಕನ್ನಡ ಸಿನಿಮಾರಂಗ ಮಾದಕ ಜಾಲದಲ್ಲಿ ಒಳಗೊಂಡಿದೆ. ಹಲವು ನಟ-ನಟಿಯರು ಹಾಗೂ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ. ಸಮಾಜಕ್ಕೆ ಒಳಿತಾಗಲಿ ಎಂಬ ಕಾರಣಕ್ಕೆ ಈ ವಿಚಾರವನ್ನು ನಾನು ಬಹಿರಂಗಪಡಿಸುತ್ತಿದ್ದೇನೆ ಎಂದರು.

ಇಡೀ ಚಿತ್ರರಂಗ ಇದರಲ್ಲಿ ಭಾಗಿಯಾಗಿದೆ ಎಂದು ನಾನು ಹೇಳಲ್ಲ. ಆದರೆ, ಕೆಲವರು ಭಾಗಿಯಾಗಿರೋದ್ರಿಂದ ಇಡೀ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ಮಾಫಿಯಾದ ಹಿಂದೆ ರಾಜಕಾರಣಿಗಳು, ಮಾಡೆಲ್ ಏಜೆನ್ಸಿಗಳು ಸೇರಿದಂತೆ ಇನ್ನು ಅನೇಕರು ಇದ್ದಾರೆಂದು ಗಂಭೀರ ಆರೋಪ ಮಾಡಿದರು.

ಒಬ್ಬ ಯುವನಟ ತೀರಿಹೋದರು. ಏಕೆ ಅವರ ಪೋಸ್ಟ್ ಮಾರ್ಟಮ್ ಮಾಡಲಿಲ್ಲ. ಇದರ ಹಿಂದೆ ರಾಜಕೀಯ ನಾಯಕರ ಕೈವಾಡ ಇದೆ ಎಂದು ಆರೋಪಿಸಿದರು. ಅಂದಹಾಗೆ ಇತ್ತೀಚೆಗೆ ಬಾಲಿವುಡ್​ ನಟ ಸುಶಾಂತ್​ ಮೃತಪಟ್ಟರು. ಆದರೆ, ಸುಶಾಂತ್​ ಶವಪರೀಕ್ಷೆ ನಡೆದಿದ್ದು, ತನಿಖೆ ಮುಂದುವರಿದಿದೆ. ಚಂದನವನದಲ್ಲಿ ನಟ ಚಿರು ಹೃದಯಾಘಾತದಿಂದ ಮೃತಪಟ್ಟರು. ಇವರ ಬೆನ್ನಲ್ಲೇ ಮತ್ತೊಬ್ಬ ಯುವನಟ ಸುಶೀಲ್​ ಗೌಡ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಇಂದ್ರಜಿತ್​ ಹೇಳಿದ್ದು, ಯಾರ ಕುರಿತು ಎಂಬುದು ಇದೀಗ ನಿಗೂಢವಾಗಿದೆ.

ನಿನ್ನೆ ಮೊನ್ನೆ ಬಂದವರು, ಮೂರ್ನಾಲ್ಕು ಸಿನಿಮಾ ಮಾಡಿದವರು ಇದರಲ್ಲಿ ಭಾಗಿಯಾಗಿದ್ದಾರೆ. ಜಾಲದಲ್ಲಿ ರಾಜಕಾರಣಿ ಮಕ್ಕಳು, ಪ್ರಭಾವಿ ನಾಯಕರ ಮಕ್ಕಳು ಇರೋದ್ರಿಂದ ಈ ತರ ಆಗ್ತಾ ಇದೆ. ಇಂತಹವರ ಬಗ್ಗೆ ತನಿಖೆ ಮಾಡಲು ಪೊಲೀಸ್ ಇಲಾಖೆಗೆ ಭಯನಾ? ಹನಿಟ್ರ್ಯಾಪ್ ವಿಚಾರವಾಗಿ ಸುದ್ದಿಯಾಯ್ತು. ಅದರ ಬಗ್ಗೆ ಯಾಕೆ ತನಿಖೆ ನಡೆಸಲಿಲ್ಲ? ಯಾಕೆ ಕೈಬಿಟ್ರಿ? ಪೊಲೀಸರಿಗೆ ಕ್ರಮ‌ ಕೈಗೊಳ್ಳೋಕೆ ಧೈರ್ಯ ಇಲ್ವಾ? ಎಂದು ಪ್ರಶ್ನಿಸಿದರು.

ಸರಿಯಾಗಿ ಕನ್ನಡ ಮಾತಾಡೋಕೆ ಬರದವರು ಡ್ರಗ್ಸ್ ತಗೊಂಡು ಕನ್ನಡ ಸಿನಿಮಾ ಹಾಳು ಮಾಡ್ತಾ ಇದ್ದಾರೆ. ಈ ರೀತಿ ನಮ್ಮ ಸಿನಿಮಾರಂಗ ಹಾಳಾಗಬಾರದೆಂದು ಹೇಳ್ತಾ ಇದ್ದೀನಿ. ತನಿಖೆಗೆ ಬೇಕಾದ ವಿಚಾರ ಹೇಳಲು ನಾನು ತಯಾರಿದ್ದೇನೆ. ಇದರಿಂದ ಪೊಲೀಸರಿಗೆ ಸಹಾಯ ಆಗಲಿ. ಕನ್ನಡ ಚಿತ್ರರಂಗ ಇಂತಹ ಕಳಂಕದಿಂದ ಹೊರಬರಲು ಸಹಾಯ ಆಗುತ್ತದೆ. ನನಗೆ ರಕ್ಷಣೆ ಕೊಟ್ರೆ, ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದರು.

ರಕ್ತ ಪರೀಕ್ಷೆ ಮಾಡಿಸಿ, ಆಗ ಎಲ್ಲವೂ ಬಹಿರಂಗವಾಗಲಿದೆ. ಈ ಹಿಂದೆ ಹಲವು ನಟ-ನಟಿಯರು ಕಾರಲ್ಲಿ ಸಿಕ್ಕಿಬದ್ದಿದ್ದರು. ಪಾರ್ಟಿ, ಪಬ್ಬು ಅಂತಾ ಯಾರ್ಯಾರು ಎಲ್ಲಿ ಎಲ್ಲಿ ಇದ್ರು ಅಂತಾ ಪೊಲೀಸರಿಗೆ ಗೊತ್ತಿದೆ. ಪೊಲೀಸರಿಗೆ ಸಪೋರ್ಟಿವ್ ಆಗಿ ನಾನು ಹೇಳಬಲ್ಲೆ‌ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net