ಮೇಘನಾ ರಾಜ್ ನಟನೆಯಲ್ಲಿ ಮುಂದುವರಿಯುವ ಬಗ್ಗೆ ಚಿರು ಮನಸ್ಸಲ್ಲೇನಿತ್ತು?

thumb
Published on

ಬೆಂಗಳೂರು: ಚಿರಂಜೀವಿ ಸರ್ಜಾ ನಿಧನದ ಬಳಿಕ ಪತ್ನಿ ಮೇಘನಾ ಮತ್ತು ಸರ್ಜಾ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು. ಹೀಗಿರುವಾಗಲೇ ಇತ್ತೀಚೆಗಷ್ಟೇ ಇಲ್ಲದ ಚಿರು, ಮಗುವಿನ ರೂಪದಲ್ಲಿ ಆಗಮಿಸಿ ಸರ್ಜಾ ಕುಟುಂಬದಲ್ಲಿ ಸಂತಸದ ಹೊನಲನ್ನು ಸುರಿಸಿದ್ದ. ಸದ್ಯ ಮಗುವಿನ ಆರೈಕೆಯಲ್ಲಿಯೇ ತೊಡಗಿಸಿಕೊಂಡಿರುವ ಮೇಘನಾ, ಮತ್ತೆ ಸಿನಿಮಾದಲ್ಲಿ ನಟಿಸುತ್ತಾರಾ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಷ್ಟೇ ಅಲ್ಲ ಮಗನನ್ನು ಹೇಗೆ ಬೆಳೆಸಲಿದ್ದಾರೆ ಎಂಬ ಬಗ್ಗೆಯೂ ಮೇಘನಾ ಹೇಳಿಕೊಂಡಿದ್ದಾರೆ.

ಈಗಷ್ಟೇ ಮಗುವಿನ ಜನನವಾಗಿರುವುದರಿಂದ ಆ ಮಗುವಿನ ಆರೈಕೆಯಲ್ಲಿರುವ ಮೇಘನಾ, ಜೂನಿಯರ್ ಚಿರು ದೊಡ್ಡವನಾಗುತ್ತಿದ್ದಂತೆ, ಮತ್ತೆ ನಟನೆಗೆ ಮರಳುವ ಬಗ್ಗೆ ಮೇಘನಾ ಮುನ್ಸೂಚನೆ ನೀಡಿದ್ದಾರೆ. ಕಳೆದ ತಿಂಗಳು ಈ ಬಗ್ಗೆ ಮಾತನಾಡಿದ್ದ ಮೇಘನಾ, ಚಿರು ಅವರ ಕನಸೇನಾಗಿತ್ತು ಎಂಬುದನ್ನೂ ನೆನಪು ಮಾಡಿಕೊಂಡಿದ್ದರು.

ಹೌದು, ಮೇಘನಾ ರಾಜ್​ ಕುಟುಂಬದಲ್ಲಿ ಎಲ್ಲರೂ ಕಲಾವಿದರೆ. ಅದರ ಆಧಾರದ ಮೇಲೆ ಮೇಘನಾ ಸಹ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ರಕ್ತಗತವಾಗಿ ಬಂದ ಆ ಕಲೆಯನ್ನು ಯಾವತ್ತಿಗೂ ಕೈ ಬಿಡಬೇಡ ಎಂಬ ಮಾತನ್ನು ಚಿರು ಈ ಮೊದಲೇ ಮೇಘನಾ ಅವರಿಗೆ ಹೇಳಿದ್ದರು. ಅದರಂತೆ, ಮಗನ ಬೆಳವಣಿಗೆಯ ಜತೆಗೆ ಸಿನಿಮಾ ಕಡೆಗೂ ಮೇಘನಾ ವಾಲಲಿದ್ದಾರೆ.

‘ನಟನೆ ನನ್ನ ಪ್ಯಾಷನ್. ಅದು ನನ್ನ ರಕ್ತದಲ್ಲಿಯೇ ಇದೆ. ನನ್ನ ಪತಿ ಸಹ ನನ್ನ ಇಷ್ಟದ ಕೆಲಸವನ್ನು ಯಾವತ್ತು ಕೈಬಿಡಬೇಡ ಎಂದೇ ಹೇಳಿದ್ದರು. ಹಾಗಾಗಿ ಏನೇ ಆದರೂ ಮುಂದಿನ ದಿನಗಳಲ್ಲಿ ನಾನು ಸಿನಿಮಾದಲ್ಲಿ ನಟಿಸಿಯೇ ನಟಿಸುತ್ತೇನೆ. ಮತ್ತೆ ಮರಳುತ್ತೇನೆ’ ಎಂದಿದ್ದರು.

ಮಗುವನ್ನು ಹೇಗೆ ಬೆಳೆಸುತ್ತಿದ್ದೇನೆ ಎಂಬ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಕೆಲ ಸಾಲುಗಳನ್ನು ಮೇಘನಾ ಶೇರ್ ಮಾಡಿಕೊಂಡಿದ್ದಾರೆ. ‘ಭವಿಷ್ಯದಲ್ಲಿ ನಿಮ್ಮ ಮಗಳು ಸುರಕ್ಷಿತವಾಗಿರಲೆಂದು ನಾನು ನನ್ನ ಮಗನನ್ನು ಬೆಳೆಸುತ್ತೇನೆ. ಇದು ನನ್ನ ಪ್ರಮಾಣ’ ಎಂದಿದ್ದಾರೆ. ಅಂದರೆ, ಭವಿಷ್ಯದಲ್ಲಿ ಒಬ್ಬ ಅತ್ಯುತ್ತಮ ಗುಣವುಳ್ಳ ಮಗನನ್ನು ಬೆಳೆಸುವುದಾಗಿ ಮೇಘನಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net