

ಕಳೆದೆರೆಡು ತಿಂಗಳುಗಳಿಂದ ಸತತ ಸುದ್ದಿಯಲ್ಲಿದ್ದವರು ಎಂದರ ಅದು ಕಾಲಿವುಡ್ ನಟಿ ಮೀರಾ ಮಿಥುನ್. ರಜನಿಕಾಂತ್, ವಿಜಯ್, ಸೂರ್ಯ, ಜ್ಯೋತಿಕಾ, ತ್ರಿಷಾ ಸೇರಿದಂತೆ ಕಾಲಿವುಡ್ನ ಜನಪ್ರಿಯ ನಟ-ನಟಿಯರ ಕಾಲೆಳೆಯುತ್ತಿದ್ದ ಮೀರಾ, ಅದೇ ಕಾರಣಕ್ಕೆ ಸುದ್ದಿಯಲ್ಲಿದ್ದರು.
ಒಂದು ಹಂತದಲ್ಲಿ ಇದೆಷ್ಟು ಅತಿಯಾಯಿತೆಂದರೆ, ಹಿರಿಯ ನಿರ್ದೇಶಕ ಭಾರತೀರಾಜ ಅವರು ಮಧ್ಯಪ್ರವೇಶಿಸಿ, ಮೀರಾಗೆ ಸುಮ್ಮನಿರುವುದಕ್ಕೆ ಹೇಳಬೇಕಾಯಿತು. ಬರೀ ಈ ರೀತಿ ಪುಗಸಟ್ಟೆ ಪ್ರಚಾರ ಪಡೆಯುವುದಕ್ಕಿಂತ ಏನಾದರೂ ಮಾಡಿ ತೋರಿಸು ಎಂದು ಬುದ್ಧಿವಾದ ಹೇಳಿದ್ದರು.
ಭಾರತೀರಾಜ ಅವರ ಬುದ್ಧಿವಾದದ ನಂತರ ಮೀರಾ ಮಿಥುನ್ ಅವರ ಸುದ್ದಿಯೇ ಇರಲಿಲ್ಲ. ಕಳೆದ 15 ದಿನಗಳಿಂದ ಸುಮ್ಮನಿದ್ದ ಮೀರಾ, ಇದೀಗ ಮತ್ತೊಮ್ಮೆ ಮಾತನಾಡಿದ್ದಾರೆ. ಈ ಬಾರಿ, ಅವರು ಯಾವುದೇ ವಿವಾದ ಮೈಮೇಲೆ ಎಳೆದುಕೊಂಡಿಲ್ಲ. ಬದಲಿಗೆ ಸ್ವಯಂಘೋಷಿತ ದೇವಮಾನವ ಬಿಡದಿ ಮೂಲದ ನಿತ್ಯಾನಂದರ ಬಗ್ಗೆ ಮಾತನಾಡಿದ್ದಾರೆ.
ಕೈಲಾಸ ಎಂಬ ಹೊಸ ರಾಷ್ಟ್ರವನ್ನು ಸ್ಥಾಪಿಸಿರುವ ನಿತ್ಯಾನಂದ, ಗಣಪತಿ ಹಬ್ಬದಂದು ತಮ್ಮ ದೇಶ ಹೊಸ ಕರೆನ್ಸಿ ಬಿಡುಗಡೆ ಮಾಡಿದ್ದರು. ಈ ವಿಷಯವಾಗಿ ಮೀರಾ ಒಂದು ಟ್ವೀಟ್ ಮಾಡಿದ್ದಾರೆ. ಕೈಲಾಸಕ್ಕೆ ಒಮ್ಮೆ ಹೋಗಿ ಬರಬೇಕು ಎಂಬ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಎಲ್ಲರೂ ಅವರ ಕಾಲೆಳೆದರು. ಎಲ್ಲರೂ ಅವಮಾನ ಮಾಡಿದರು. ಆದರೆ, ಈಗ ಅವರೊಂದು ರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ. ದೊಡ್ಡದೊಡ್ಡ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಒಮ್ಮೆ ಕೈಲಾಸಲ್ಲೆ ಭೇಟಿ ಕೊಡಬೇಕು' ಎಂದು ಅವರು ಬರೆದುಕೊಂಡಿದ್ದಾರೆ.
ನಿತ್ಯಾನಂದ ಅವರ ಅಭಿಮಾನಿಯಾಗಿರುವ ಮೀರಾ, ಅವರ ಬಗ್ಗೆ ಈ ಹಿಂದೆ ಹಲವು ಬಾರಿ ಮಾತನಾಡಿದ್ದಾರೆ. ನಿತ್ಯಾನಂದ ಅವರ 'ಲಿವಿಂಗ್ ಎನ್ಲೈಟ್ಮೆಂಟ್' ಪುಸ್ತಕವನ್ನು ಓದಿ, ಈ ಹಿಂದೆ ಒಮ್ಮೆ ಒಂದು ವಿಡಿಯೋ ಸಹ ಹಾಕಿದ್ದರು.