25 ವರ್ಷಗಳ ನಂತರ ಜತೆಯಾದ ಕಮಲ್​-ಮೀನಾ ... ಯಾವ ಚಿತ್ರಕ್ಕೆ ಹೇಳಿ?

Kamal Hassan - Meena - Final
Published on

ಚೆನ್ನೈ: 'ಇಂಡಿಯನ್​ 2' ಮತ್ತು 'ವಿಕ್ರಮ್​' ಚಿತ್ರಗಳನ್ನು ಮುಗಿಸಯವ ಮುನ್ನ, 'ಪಾಪನಾಶಂ'ನ ಮುಂದುವರೆದ ಭಾಗದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಅಲ್ಲೊಂದು ಮಹತ್ತರವಾದ ಬದಲಾವಣೆ ಆಗಬೇಕಾಗಿರುವುದರಿಂದ ನಿಜಕ್ಕೂ ಚಿತ್ರ ಸೆಟ್ಟೇರುತ್ತದಾ ಎಂಬ ಗೊಂದಲ ಎಲ್ಲರಲ್ಲೂ ಇತ್ತು. ಇದೀಗ ಗೊಂದಲಗಳೆಲ್ಲ ಬಗೆಹರಿದಿದ್ದು, ಸದ್ಯದಲ್ಲೇ ಚಿತ್ರ ಪ್ರಾರಂಭವಾಗುವ ನಿರೀಕ್ಷೆ ಇದೆ.

ಮೋಹನ್​ ಲಾಲ್​ ಅಭಿನಯದ ಮಲಯಾಳಂ ಚಿತ್ರ 'ದೃಶ್ಯಂ 2' ಕೆಲವು ತಿಂಗಳ ಹಿಂದೆ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ತಕ್ಷಣವೇ, ಆ ಚಿತ್ರ ವೆಂಕಟೇಶ್​ ಅಭಿನಯದಲ್ಲಿ ತೆಲುಗಿಗೂ ರೀಮೇಕ್​ ಆಯಿತು. ಕನ್ನಡ ಮತ್ತು ಹಿಂದಿಯಲ್ಲೂ ಚಿತ್ರ ರೀಮೇಕ್​ ಆಗುವ ಕುರಿತು ಸುದ್ದಿಯಾಯಿತು. ಈ ಮಧ್ಯೆ, ತಮಿಳಿಗೂ ಚಿತ್ರ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದ್ದರೂ, ಅಲ್ಲೊಂದು ಸಮಸ್ಯೆ ಇತ್ತು.

ಕಮಲ್​ ಹಾಸನ್​ ಏನೋ, ಚಿತ್ರ ಮಾಡುವುದಕ್ಕೆ ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಅವರೊಂದು ಕಂಡೀಷನ್​ ಹಾಕಿದ್ದರಂತೆ. ಅದೇನೆಂದರೆ, 'ಪಾಪನಾಶಂ'ನಲ್ಲಿ ಕಮಲ್​ ಪತ್ನಿಯಾಗಿ ಗೌತಮಿ ನಟಿಸಿದ್ದರು. ಆ ಸಂದರ್ಭದಲ್ಲಿ ಅವರಿಬ್ಬರೂ ಅನ್ಯೋನ್ಯವಾಗಿದ್ದರು. ಲಿವ್ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದರು. ಈಗ ಅವರ ಮಧ್ಯೆ ಸಂಬಂಧ ಹಳಸಿರುವುದರಿಂದ, ಗೌತಮಿ ಬದಲು ಇನ್ನೊಬ್ಬ ನಾಯಕಿ ಬೇಕು ಎಂದು ಹೇಳಿದ್ದರಂತೆ. ಮೀನಾ ಅವರನ್ನು ಕೇಳಿ ನೋಡಿ ಎಂದು ಸಲಹೆ ನೀಡಿದ್ದಾರಂತೆ.

ಮೊದಲ ಚಿತ್ರದಲ್ಲಿ ಗೌತಮಿ ಇದ್ದು, ಅದರ ಮುಂದಿನ ಭಾಗದಲ್ಲಿ ಅವರ ಬದಲು ಇನ್ನೊಬ್ಬ ನಾಯಕಿ ಬಂದರೆ ಜನ ಏನು ಹೇಳಬಹುದು ಎಂಬ ಭಯ ಮೊದಲು ನಿರ್ದೇಶಕ ಜೀತು ಜೋಸಫ್​ಗೂ ಇತ್ತಂತೆ. ಕೊನೆಗೆ, ಒಂದು ರಿಸ್ಕ್​ ತೆಗೆದುಕೊಳ್ಳೋಣ ಎಂದು ತೀರ್ಮಾನಿಸಿರುವ ಅವರು, ಚಿತ್ರದಲ್ಲಿ ನಟಿಸುವುದಕ್ಕೆ ಮೀನಾ ಅವರನ್ನು ಒಪ್ಪಿಸಿದ್ದಾರಂತೆ. ಮೀನಾ ಈಗಾಗಲೇ ಮಲಯಾಳಂ ಹಾಗೂ ತೆಲುಗಿನ 'ದೃಶ್ಯಂ 2'ಗಳಲ್ಲಿ ನಟಿಸಿದ್ದರು. ಈಗ ಅದರ ರೀಮೇಕ್​ ಆದ 'ಪಾಪನಾಶಂ 2' ಚಿತ್ರದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ.

ವಿಶೇಷವೆಂದರೆ, ಕಮಲ್​ ಮತ್ತು ಮೀನಾ 25 ವರ್ಷಗಳ ನಂತರ ಮತ್ತೊಮ್ಮೆ ಜತೆಯಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ, ಅವರಿಬ್ಬರೂ 'ಅವೈ ಷಣ್ಮುಖಿ'ಯಲ್ಲಿ ಪತಿ-ಪತ್ನಿಯಾಗಿ ನಟಿಸಿದ್ದರು. ಈಗ 'ಪಾಪನಾಶಂ 2' ಚಿತ್ರದಲ್ಲಿ ಮತ್ತೊಮ್ಮೆ ಸತಿ-ಪತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net