ನಿಂತೇ ಹೋಯ್ತು ಪ್ರಭಾಸ್​ ಅಭಿನಯಿಸಬೇಕಿದ್ದ 'ಧೂಮ್​ 4'

Prabhas - Dhoom 4 - Final
Published on

ಮುಂಬೈ: ಆಮೀರ್​ ಖಾನ್​, ಅಭಿಷೇಕ್​ ಬಚ್ಚನ್​, ಕತ್ರೀನಾ ಕೈಫ್​ ಮುಂತಾದವರು ಅಭಿನಯಿಸಿದ್ದ 'ಧೂಮ್​ 3' ಚಿತ್ರವು ಬಿಡುಗಡೆಯಾಗಿ ಎಂಟು ವರ್ಷಗಳೇ ಆಗಿವೆ. ಈ ಮಧ್ಯೆ, 'ಧೂಮ್​ 4' ಚಿತ್ರವನ್ನು ತೆರೆಗೆ ತರಬೇಕು ಎಂದು ಯಶ್​ರಾಜ್​ ಫಿಲಂಸ್​ ಸಂಸ್ಥೆಯು ಪ್ರಯತ್ನ ನಡೆಸುತ್ತಲೇ ಇದೆ. ಅದರಲ್ಲೂ ಪ್ರಭಾಸ್​ ಅಭಿನಯದಲ್ಲಿ ಚಿತ್ರ ಮಾಡಬೇಕು ಎಂದು ನಿರ್ಮಾಣ ಸಂಸ್ಥೆ ಹೆಜ್ಜೆ ಇಟ್ಟಿತ್ತು. ಆದರೆ, ಇದೀಗ ಆ ಚಿತ್ರ ಡ್ರಾಪ್​ ಆಗಿದೆ.

ಹೌದು, ಪ್ರಭಾಸ್​ ಅಭಿನಯಿಸಬೇಕಿದ್ದ 'ಧೂಮ್​ 4' ಚಿತ್ರವು ನಿಂತು ಹೋಗಿದೆ. ಅದಕ್ಕೆ ಕಾರಣ, ಪ್ರಭಾಸ್​ ಅವರ ಡೇಟ್ಸ್​ ಸಿಕ್ಕದಿರುವುದು. ಪ್ರಭಾಸ್​ ಎಷ್ಟು ಬ್ಯುಸಿಯಾಗಿದ್ದಾರೆ ಮತ್ತು ಅದೆಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬುದು ಇಡೀ ಜಗತ್ತಿಗೇ ಗೊತ್ತಾಗಿದೆ. ಪ್ರಭಾಸ್​ ಅವರ ಸದ್ಯದ ಶೆಡ್ಯೂಲ್​ ನೋಡುತ್ತಿದ್ದರೆ, ಇನ್ನು ಮೂರು ವರ್ಷ ಅವರು ಸಿಗುವುದು ಕಷ್ಟವೆನ್ನುವಂತಿದೆ.

ಮೂರು ವರ್ಷದ ನಂತರವಾದರೂ ಅವರು ಒಪ್ಪಿ ಚಿತ್ರ ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಅಷ್ಟರಲ್ಲಿ ಪ್ರಭಾಸ್​ ಇನ್ನೆಷ್ಟು ಚಿತ್ರಗಳನ್ನು ಒಪ್ಪಿಕೊಂಡಿರುತ್ತಾರೋ, ಇನ್ನೂ ಏನೇನು ಬದಲಾವಣೆಗಳು ಆಗಿರುತ್ತವೋ ಹೇಳುವುದು ಕಷ್ಟ. ಹಾಗಾಗಿ, ಆ ಚಿತ್ರವನ್ನು ಯಶ್​ರಾಜ್​ ಫಿಲಂಸ್​ ಸಂಸ್ಥೆಯು ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ.

ಇದರ ಜತೆಗೆ ಇನ್ನೂ ಒಂದು ಕಾರಣವಿದೆ. ಅದೇನೆಂದರೆ, ಈ ಮೊದಲು ಪ್ರಭಾಸ್​ ಯಾವೊಂದು ಹಿಂದಿ ಚಿತ್ರದಲ್ಲೂ ಒಪ್ಪಿರಲಿಲ್ಲ. 'ಧೂಮ್​ 4'ನಲ್ಲಿ ಪ್ರಭಾಸ್​ ನಟಿಸುತ್ತಿರುವುದೇ ದೊಡ್ಡ ಹೈಲೈಟ್​ ಆಗಿತ್ತು. ಈಗ 'ಆದಿಪುರುಷ್​' ಚಿತ್ರದ ಮೂಲಕ ಬಾಲಿವುಡ್​ಗೆ ಪ್ರಭಾಸ್​ ಎಂಟ್ರಿ ಕೊಟ್ಟಿದ್ದಾಗಿದೆ. ಹೀಗಿರುವಾಗ, 'ಧೂಮ್​ 4'ನಲ್ಲಿ ನಟಿಸುವುದರಲ್ಲಿ ವಿಶೇಷವೇನಿದೆ ಎಂದು ಯಶ್​ರಾಜ್​ ಸಂಸ್ಥೆಗೆ ಅನಿಸಿದೆ. ಇವೆಲ್ಲಾ ಕಾರಣಗಳಿಂದ ಅವರು ಈ ಚಿತ್ರವನ್ನು ಕೈಬಿಟ್ಟು, ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net