ಮತ್ತೆ 'ಮಠ'ದತ್ತ ಹೊರಟ ಗುರುಪ್ರಸಾದ್​ …

Mata
Published on

ಬೆಂಗಳೂರು: ಗುರುಪ್ರಸಾದ್​ ನಿರ್ದೇಶನದ, ಜಗ್ಗೇಶ್​ ಅಭಿನಯದ 'ಮಠ' ಚಿತ್ರವು ಕನ್ನಡದ ಕ್ಲಾಸಿಕ್​ ಚಿತ್ರಗಳಲ್ಲೊಂದು. ಈಗ ಇದೇ ಹೆಸರಿನಲ್ಲಿ ಇನ್ನೊಂದು ಹೊಸ ಚಿತ್ರ ನ. 18ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲೂ ಗುರುಪ್ರಸಾದ್​ ಇದ್ದಾರೆ. ಆದರೆ, ನಿರ್ದೇಶಕರಾಗಲ್ಲ, ನಟರಾಗಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಹೌದು, ಗುರುಪ್ರಸಾದ್​ ಮತ್ತೊಮ್ಮೆ 'ಮಠ'ದೊಂದಿಗೆ ಗುರುತಿಸಿಕೊಂಡಿದ್ದು, ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ತಬಲಾ ನಾಣಿ, ಸಾಧು ಕೋಕಿಲ, ಶರತ್​ ಲೋಹಿತಾಶ್ವ, ಬಿರಾದಾರ್​, ಮಂಡ್ಯ ರಮೇಶ್​ ಸೇರಿದಂತೆ ಹಲವು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದು, ಇತ್ತೀಚೆಗೆ ಈ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ ಚಿತ್ರಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ. ಇದಕ್ಕೂ ಮುನ್ನ 'ಪುಟಾಣಿ ಸಫಾರಿ', 'ವರ್ಣಮಯ', 'ವಾಸಂತಿ ನಲಿದಾಗ' ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವೆಂಶಿ, ಈ ಬಾರಿ ಇನ್ನೊಂದು ವಿಭಿನ್ನ ಕಥೆಯೊಂದಿಗೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರವನ್ನು 25 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ವಿ ಆರ್ ಕಂಬೈನ್ಸ್ ಬ್ಯಾನರ್​ನಡಿ ಆರ್.ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೀವನ್ ಗೌಡ ಛಾಯಾಗ್ರಾಹಣ, ಶ್ರೀ ಗುರು ಸಂಗೀತ ಸಂಯೋಜನೆ ಇರುವ ಈ ಚಿತ್ರಕ್ಕೆ ಯೋಗರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್ ಮತ್ತು ಗೌಸ್​ ಪೀರ್​ ಅವರ ಸಾಹಿತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net