ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯ್ತು 'ಮಾರ್ಟಿನ್​' ಟೀಸರ್

Martin
Published on

ಬೆಂಗಳೂರು: ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್​' ಚಿತ್ರದ ಟೀಸರ್​ ಇಂದು ಸಂಜೆ 05.05ಕ್ಕೆ ಯೂಟ್ಯೂಬ್​ನ ಲಹರಿ ಮ್ಯೂಸಿಕ್​ ಚಾನಲ್​ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಇಂದು ಮಧ್ಯಾಹ್ನ ವೀರೀಶ್​ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್​ ಬಿಡುಗಡೆ ಮಾಡಲಾಗಿದೆ.

ಅಭಿಮಾನಿಗಳಿಗೆಂದೇ 'ಮಾರ್ಟಿನ್​' ಚಿತ್ರದ ಪೇಯ್ಡ್​ ಪ್ರೀಮಿಯರ್​ ಪ್ರದರ್ಶನವನ್ನು ವೀರೇಶ್​ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಧ್ರುವ ಸರ್ಜಾ ಅವರ ನೂರಾರು ಅಭಿಮಾನಿಗಳು ಟಿಕೆಟ್​ ಪಡೆದು ಟೀಸರ್​ ನೋಡಿ ಕಣ್ತುಂಬಿಕೊಂಡರು.

ಇದಕ್ಕೂ ಮುನ್ನ, ಸಚಿವ ವಿ ಸೋಮಣ್ಣ ಅವರು ಕೆಂಪೇಗೌಡ ಸಮುದಾಯ ಭವನದಲ್ಲಿ 'ಮಾರ್ಟಿನ್​' ಚಿತ್ರದ ಪೋಸ್ಟರ್​ ಬಿಡುಗಡೆ ಮಾಡಿ, ಮೆರವಣಿಗೆಗೆ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಧ್ರುವ ಸರ್ಜಾ, ನಿರ್ಮಾಪಕ ಉದಯ್ ಕೆ ಮೆಹ್ತಾ, ವೈಭವಿ ಶಾಂಡಿಲ್ಯ, ಅನ್ವೇಷಿ ಮುಂತಾದವರು ಭಾಗಿಯಾಗಿದ್ದರು. ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಂಡೆಮದ್ದಳೆ ಕಲಾವಿದರಲ್ಲದೆ, ಆಂಜನೇಯನ ವೇಷಧಾರಿಗಳು ಕೂಡ ಭಾಗಿಯಾಗಿದ್ದರು. ಇನ್ನು, ವೀರೇಶ್​ ಚಿತ್ರಮಂದಿರದಲ್ಲಿ 'ಮಾರ್ಟಿನ್​' ಟೀಸರ್​ ನೋಡಲು ಅಭಿಮಾನಿಗಳ ದಂಡುನೆರೆದಿತ್ತು. 80,100 ರೂ.ಗಳನ್ನು ಕೊಟ್ಟು ಟಕೆಟ್ ಖರೀದಿಸಿ ಅಭಿಮಾನಿಗಳು ಟೀಸರ್​ ನೋಡಿದರು.

ಕನ್ನಡ ಚಿತ್ರರಂಗದ ಮಟ್ಟಿಗೆ 'ಮಾರ್ಟಿನ್' ಟೀಸರ್ ಬಿಡುಗಡೆ ಕಾರ್ಯಕ್ರಮ ಒಂದು ವಿಶೇಷ ಕಾರ್ಯಕ್ರಮ ಎಂದರೆ ತಪ್ಪಿಲ್ಲ. ಇದುವರೆಗೂ ಯಾರೂ ಅಭಿಮಾನಿಗಳಿಗೆಂದು ಪೇಯ್ಡ್​ ಟೀಸರ್​ ಬಿಡುಗಡೆ ಕಾರ್ಯಕ್ರಮ ಮಾಡಿರಲಿಲ್ಲ. ಈಗ ಅಂಥದ್ದೊಂದು ಕಾರ್ಯಕ್ರಮವನ್ನು ಚಿತ್ರತಂಡ ಮಾಡಿದ್ದು, ಇದರಿಂದ ಬರುವ ಹಣವನ್ನು ಗೋಶಾಲೆಗೆ ನೀಡಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net