

ಬೆಂಗಳೂರು: ನಟಿ ಶುಭಾ ಪೂಂಜಾ ಅವರ ಮನೆಯಲ್ಲಿ ನಡೆದಂತಹ ಸ್ವಾರಸ್ಯಕರ ಘಟನೆಯೊಂದನ್ನು ನಟಿ ಹಾಗೂ ಸ್ಟಾರ್ ಆ್ಯಂಕರ್ ಅನುಶ್ರೀ ಅವರು ಕ್ಯಾಮೆರಾ ಮುಂದೆ ಬಿಚ್ಚಿಟ್ಟಿದ್ದಾರೆ.
ಪ್ರೇಮಿಗಳ ದಿನದಂದು ಅನುಶ್ರೀ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ನಡೆಸಿದ ಸಂದರ್ಶನದಲ್ಲಿ ನಟಿ ಶುಭ ಪೂಂಜಾ ಮತ್ತು ಅವರ ಪತಿ ಸಮಂತ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅಂದಹಾಗೆ ಕಳೆದ ವರ್ಷ ಜನವರಿಯಲ್ಲಿ ಶುಭಾ ಅವರು ಸಮಂತ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರದ್ದು ಪ್ರೇಮ ವಿವಾಹ. ಹೀಗಾಗಿ ಪ್ರೇಮಿಗಳ ದಿನದಂದು ಅನುಶ್ರೀ ಅವರ ಕಾರ್ಯಕ್ರಮದ ಭಾಗವಾಗಿದ್ದರು.
ಶುಭಾ ಅವರ ಸಂದರ್ಶನದ ನಡುವೆ ಅನುಶ್ರೀ ಅವರು ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಆದರೆ, ಅನುಶ್ರೀ ಅವರ ಪ್ರಕಾರ ಅದು ನೋವಿನ ಸಂಗತಿಯಂತೆ. ಏನಪ್ಪಾ ಆ ನೋವಿನ ಸಂಗತಿ ಅಂದರೆ, ಶುಭಾ ಅವರ ಮನೆಯಲ್ಲಿ ಒಮ್ಮೆ ಅನುಶ್ರೀ ಅವರು ನಾಯಿಗಾಗಿ ಮಾಡಿದ್ದ ಆಹಾರವನ್ನು ಸೇವಿಸಿದ್ದರಂತೆ.
ಅಂದಹಾಗೆ ಅನುಶ್ರೀ ಮತ್ತು ಶುಭಾ ಇಬ್ಬರು ಮಂಗಳೂರು ಮೂಲದವರು. ಇಬ್ಬರು ಸಹ ಬಹುಕಾಲದಿಂದ ಸ್ನೇಹಿತರು. ಒಂದು ದಿನ ಅನುಶ್ರೀ ಅವರು ಶುಭಾ ಅವರ ಮನೆಗೆ ಬಂದಾಗ ತುಂಬಾ ಹಸಿವು ಇತ್ತಂತೆ. ಈ ವೇಳೆ ಶುಭಾ ಅವರು ತಾವು ಚಿಕನ್ ಮಾಡಿರುವುದಾಗಿ ಮತ್ತು ಅದು ಡೈನಿಂಗ್ ಟೇಬಲ್ ಇರುವುದಾಗಿ ತಿಳಿಸಿದ್ದಾರೆ.
ಇತ್ತ ತುಂಬಾ ಹಸಿವಿನಿಂದ ಬಳಲುತ್ತಿದ್ದ ಅನುಶ್ರೀ ತಕ್ಷಣ ಅನ್ನ ಮತ್ತು ಚಿಕನ್ ಸಾಂಬರ್ ಬಡಿಸಿಕೊಂಡು ಊಟ ಮಾಡಿದ್ದಾರೆ. ಆದರೆ, ಊಟದಲ್ಲಿ ರುಚಿ ಕಡಿಮೆ ಇರುವುದನ್ನು ಗಮನಿಸಿದ ಅನುಶ್ರೀ, ಉಪ್ಪು ಕೊಡು ಅಂತಾ ಶುಭಾರನ್ನು ಕೇಳಿದ್ದಾರೆ. ಈ ವೇಳೆ ಶುಭಾ ಅವರು ಅದು ನಾಯಿಗಾಗಿ ತಯಾರಿಸಿದ ಚಿಕನ್ ಊಟ ಎಂದು ಹೇಳಿದ್ದಾರೆ.
ಇದನ್ನು ಕಾರ್ಯಕ್ರಮದಲ್ಲಿ ನೆನೆಸಿಕೊಂಡ ಅನುಶ್ರೀ, ನನ್ನ ಜೀವನದಲ್ಲಿ ಇದು ಅತ್ಯಂತ ನೋವಿನ ಅನುಭವ ಅಂತಾ ತುಂಬಾ ತಮಾಷೆಯಾಗಿ ಶೋನಲ್ಲಿ ಹೇಳಿಕೊಂಡರು. ಈ ವೇಳೆ ಶುಭಾ ಮತ್ತು ಅನುಶ್ರೀ ಗಹ ಗಹಿಸಿ ನಕ್ಕರು. (ಏಜೆನ್ಸೀಸ್)