ಪಾರು ಜತೆ ನಟಿಸಲು ಅನೇಕ ನಟರು ಹೆದರುತ್ತಿದ್ದ ಟೈಂನಲ್ಲಿ ಆಕೆ ಪರ ನಿಂತಿದ್ದು ಈ ಇಬ್ಬರು ಮಾತ್ರ: ಶಾಕಿಂಗ್​ ಸಂಗತಿ ಬಿಚ್ಚಿಟ್ಟ ನಿರ್ದೇಶಕ! Parvathy Thiruvothu

ತಾಜಾ ಸಂಗತಿ ಏನೆಂದರೆ, ವೃತ್ತಿಜೀವನದ ಹೆಜ್ಜೆಗುರುತುಗಳು ಮತ್ತು ಪಾರ್ವತಿ ಅವರು ಎದುರಿಸಿದ ಅಗ್ನಿಪರೀಕ್ಷೆಗಳ ಕುರಿತು ಖ್ಯಾತ ನಿರ್ದೇಶಕ ಅಲೆಪ್ಪಿ ಅಶ್ರಫ್ ನೀಡಿರುವ ಹೇಳಿಕೆಗಳು ಈಗ ಸಿನಿವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
Parvathy Thiruvothu
ಮಲಯಾಳಂ ನಟಿ ಪಾರ್ವತಿ ತಿರುವೋತು
Published on: 

ತಿರುವನಂತಪುರಂ : ಮಲಯಾಳಂ ಚಿತ್ರರಂಗದಲ್ಲಿ ದಿಟ್ಟ ನಿರ್ಧಾರಗಳು ಮತ್ತು ಕಟು ವಾಸ್ತವ ಅಥವಾ ಸತ್ಯ ಸಂಗತಿಗಳನ್ನು ಯಾರಿಗೂ ಅಂಜದೆ ಮುಕ್ತವಾಗಿ ಮಾತನಾಡುವ ನಟಿ ಎಂದರೆ ಅದು ಪಾರ್ವತಿ ತಿರುವೋತು ( Parvathy Thiruvothu ). ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಹಾಗೂ ಚಿತ್ರರಂಗದಲ್ಲಿ ನಟಿಯರಿಗೆ ಆಗುವ ಅನ್ಯಾಯಗಳ ಬಗ್ಗೆ ಓಪನ್ ಆಗಿ ಧ್ವನಿ ಎತ್ತುವ ಮೂಲಕ ಅನೇಕ ಬಾರಿ ಪಾರ್ವತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಾರೆ. ಏನೇ ವಿವಾದಗಳು ಎದುರಾದರು ಕೂಡ ಸತ್ಯದ ಪರ ಧ್ವನಿ ಎತ್ತುವುದನ್ನು ಇಂದಿಗೂ ಪಾರ್ವತಿ ನಿಲ್ಲಿಸಿಲ್ಲ. ಈ ಕಾರಣಕ್ಕೆ ಪಾರ್ವತಿ ಅವರು ಚಿತ್ರರಂಗದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ.

ತಾಜಾ ಸಂಗತಿ ಏನೆಂದರೆ, ವೃತ್ತಿಜೀವನದ ಹೆಜ್ಜೆಗುರುತುಗಳು ಮತ್ತು ಪಾರ್ವತಿ ಅವರು ಎದುರಿಸಿದ ಅಗ್ನಿಪರೀಕ್ಷೆಗಳ ಕುರಿತು ಖ್ಯಾತ ನಿರ್ದೇಶಕ ಅಲೆಪ್ಪಿ ಅಶ್ರಫ್ ನೀಡಿರುವ ಹೇಳಿಕೆಗಳು ಈಗ ಸಿನಿವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಕೇವಲ ನಟಿಯಾಗಿ ಮಾತ್ರವಲ್ಲದೆ ತನ್ನ ಬಲವಾದ ಸಿದ್ಧಾಂತ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಆಳವಾದ ಅರಿವು ಹೊಂದಿರುವ ಪಾರ್ವತಿ, ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ದಿಟ್ಟತನದಿಂದ ಎದುರಿಸಿ ಯಶಸ್ಸಿನ ಸಿಂಹಾಸನಕ್ಕೇರಿದ್ದಾರೆ ಎಂದು ಅಶ್ರಫ್​ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಿರ್ದೇಶಕರ ಈ ಮಾತುಗಳು ಮತ್ತು ಇತ್ತೀಚಿನ ಬೆಳವಣಿಗೆಗಳು ಮಲಯಾಳಂ ಚಿತ್ರರಂಗದ ಹಿಂದಿನ ಕರಾಳ ಮುಖ ಹಾಗೂ ಬದಲಾಗುತ್ತಿರುವ ಕಾಲಮಾನದ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿವೆ.

Also Read
ಲವ್​ ಮಾಡ್ತಿದ್ರೂ ಮದುವೆವರೆಗೂ ಅದನ್ನು ಗುಟ್ಟಾಗಿ ಇಟ್ಟಿದ್ದೇಕೆ? ಕೊನೆಗೂ ಕಾರಣ ಬಿಚ್ಚಿಟ್ಟ ವಿಜಯ್​-ರಶ್ಮಿಕಾ..! Rashmika Mandanna and Vijay Deverakonda
Parvathy Thiruvothu

ಸಾಮಾನ್ಯ ನಟಿಯರಂತೆ ಕಾಲಕ್ಕೆ ತಕ್ಕಂತೆ ತಮ್ಮ ನಿಲುವುಗಳನ್ನು ಬದಲಾಯಿಸಿಕೊಂಡು ಸುರಕ್ಷಿತ ರಾಜಕಾರಣ ಮಾಡುವವರ ಸಾಲಿಗೆ ಪಾರ್ವತಿ ಸೇರಲ್ಲ ಎಂದು ಅಲೆಪ್ಪಿ ಅಶ್ರಫ್ ಬಣ್ಣಿಸಿದ್ದಾರೆ. ತಮ್ಮದೇ ವೃತ್ತಿಜೀವನದ ಉಳಿವಿಗಾಗಿ ಅಥವಾ ಅವಕಾಶಗಳಿಗಾಗಿ ತಮ್ಮ ಸಿದ್ಧಾಂತಗಳನ್ನು ಎಂದಿಗೂ ರಾಜಿ ಮಾಡಿಕೊಳ್ಳದ ಧೀರ ಮಹಿಳೆ ಅವರು. ಇತ್ತೀಚೆಗೆ ತೆರೆಕಂಡು ಭರ್ಜರಿ ಯಶಸ್ಸು ಸಾಧಿಸಿರುವ 'ಪ್ರಧಮ ದೃಷ್ಟಿಯ ಕುಟ್ಟಕ್ಕರ್' ಚಿತ್ರದ ಪ್ರಮುಖ ಪಾತ್ರದಲ್ಲಿ ಪಾರ್ವತಿ ಅಭಿನಯಿಸಿರುವುದು ಮತ್ತು ಆ ಸಿನಿಮಾ ಐತಿಹಾಸಿಕ ವಿಜಯ ಸಾಧಿಸಿರುವುದು ಅವರ ನಟನಾ ಸಾಮರ್ಥ್ಯಕ್ಕೆ ಸಿಕ್ಕಿರುವ ಮತ್ತೊಂದು ದೊಡ್ಡ ಗೌರವವಾಗಿದೆ ಎಂದು ಅಶ್ರಫ್ ತಿಳಿಸಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ವಾಣಿ ವಿಶ್ವನಾಥ್ ಮತ್ತು ಆಶಾ ಶರತ್ ಅವರಂತೆ ಒಬ್ಬ ಗಡಸು ಹಾಗೂ ಪ್ರಭಾವಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪಾರ್ವತಿ ಅತ್ಯಂತ ಜೀವಂತ ಮತ್ತು ಪ್ರಭಾವಶಾಲಿ ಅಭಿನಯವನ್ನು ನೀಡಿದ್ದಾರೆ ಎಂದು ಅಲೆಪ್ಪಿ ಅಶ್ರಫ್ ಮುಕ್ತವಾಗಿ ಪ್ರಶಂಸಿಸಿದ್ದಾರೆ. ಮಮ್ಮೂಟಿ ಅಭಿನಯದ 'ಕಸಬಾ' ಸಿನಿಮಾದಲ್ಲಿನ ಸ್ತ್ರೀವಿರೋಧಿ ದೃಶ್ಯಗಳ ವಿರುದ್ಧ ಧೈರ್ಯವಾಗಿ ಧ್ವನಿಯೆತ್ತಿದ ಕಾರಣಕ್ಕಾಗಿ ಪಾರ್ವತಿ ಚಿತ್ರರಂಗದಲ್ಲಿ ಅತಿಯಾದ ಒಂಟಿತನ ಮತ್ತು ಬಹಿಷ್ಕಾರವನ್ನು ಎದುರಿಸಬೇಕಾಯಿತು ಎಂಬ ನೋವಿನ ಸಂಗತಿಯನ್ನು ಅವರು ನೆನಪಿಸಿಕೊಂಡಿದ್ದಾರೆ. ಕೇವಲ ವಿರೋಧಿಸುವುದಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಎದುರಾದ ಆಕ್ರೋಶ, ಅತ್ಯಾಚಾರ ಬೆದರಿಕೆ ಹಾಗೂ ಕೊಲೆ ಬೆದರಿಕೆಗಳಂತಹ ಅನೇಕ ಸವಾಲುಗಳನ್ನೂ ಈ ದಿಟ್ಟ ನಟಿ ಎದುರಿಸಬೇಕಾಗಿ ಬಂದಿತ್ತು ಎಂದು ಅಶ್ರಫ್​ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಹತ್ತು ಸಾವಿರಕ್ಕೂ ಅಧಿಕ ಜನ ಸೇರಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪಾರ್ವತಿ ವೇದಿಕೆಗೆ ಬಂದಾಗ ಪ್ರೇಕ್ಷಕರ ಗ್ಯಾಲರಿಯಿಂದ ಕೇಳಿಬಂದ ಕೇಕೆ, ಕೀಳು ಮಟ್ಟದ ಸಿಳ್ಳೆ ಮತ್ತು ಅವಮಾನದ ಸದ್ದುಗಳ ಬಗ್ಗೆಯೂ ಅಲೆಪ್ಪಿ ಅಶ್ರಫ್ ಮಾತನಾಡಿದ್ದಾರೆ. ಚಪ್ಪಾಳೆಯ ಬದಲಿಗೆ ಸಿಕ್ಕ ಆ ನಿಂದನೆಗಳು ಮತ್ತು ಅವಮಾನದ ಏಳು ನಿಮಿಷಗಳು ತನಗೆ ಬದುಕಿನ ಏಳು ವರ್ಷಗಳಷ್ಟು ದೀರ್ಘವಾಗಿ ಅನಿಸಿತು ಎಂದು ಪಾರ್ವತಿ ಈ ಹಿಂದೆ ಸಂದರ್ಶನವೊಂದರಲ್ಲಿ ಸ್ವತಃ ಹೇಳಿಕೊಂಡಿರುವುದನ್ನು ಅಶ್ರಫ್​ ಅವರು ಸ್ಮರಿಸಿಕೊಂಡಿದ್ದಾರೆ. ಆದರೆ ಆ ಎಲ್ಲಾ ಅವಮಾನಗಳು ಮತ್ತು ಕಷ್ಟಗಳೇ ತನ್ನನ್ನು ಮಾನಸಿಕವಾಗಿ ಮತ್ತಷ್ಟು ಗಟ್ಟಿಗೊಳಿಸಿದವು ಎಂದು ಪಾರ್ವತಿ ದೃಢತೆಯಿಂದ ಮೆಟ್ಟಿನಿಂತು ಸಾಧಿಸಿ ತೋರಿಸಿದ್ದಾರೆ ಎಂದಿದ್ದಾರೆ.

ಚಿತ್ರರಂಗದ ಪ್ರಭಾವಿ ವ್ಯಕ್ತಿಗಳು ಹಾಗೂ ಕೆಲವರು ತನ್ನನ್ನು ಮೂಲೆಗುಂಪು ಮಾಡಲು ಮತ್ತು ವೃತ್ತಿಜೀವನವನ್ನು ಅಂತ್ಯಗೊಳಿಸಲು ಹೋದ ಸಂದರ್ಭದಲ್ಲಿ, ಪಾರ್ವತಿ ಅಕ್ಷರಶಃ ಬೂದಿಯಿಂದ ಎದ್ದು ಬಂದ ಫೀನಿಕ್ಸ್ ಪಕ್ಷಿಯಂತೆ ಮರುಹುಟ್ಟು ಪಡೆದರು ಎಂದು ಅಶ್ರಫ್ ಬಣ್ಣಿಸಿದ್ದಾರೆ. ಯಶಸ್ವಿ ಚಲನಚಿತ್ರವಾದ 'ಉಯರೆ' ಸಿನಿಮಾದ ಮೂಲಕ ಅವರು ಮತ್ತೆ ಉತ್ತುಂಗಕ್ಕೇರಿದರು. ಈ ಸಿನಿಮಾದ ಸಮಯದಲ್ಲೂ ಸಹ ಅನೇಕ ನಟರು ಪಾರ್ವತಿ ಅವರೊಂದಿಗೆ ನಟಿಸಲು ಹೆದರಿ ಹಿಂದೆ ಸರಿದಿದ್ದರು ಮತ್ತು ಅಂತಹ ಕಷ್ಟದ ಹಾಗೂ ಸಂಕಷ್ಟದ ಪರಿಸ್ಥಿತಿಯಲ್ಲಿ ಯುವ ನಟರಾದ ಟೊವಿನೋ ಥಾಮಸ್ ಮತ್ತು ಆಸಿಫ್ ಅಲಿ ಅವರು ಪಾರ್ವತಿಗೆ ಬೆನ್ನೆಲುಬಾಗಿ ನಿಂತು ನೈತಿಕ ಬೆಂಬಲ ಸೂಚಿಸಿದರು ಎಂದು ಅವರು ಪ್ರಶಂಸಿಸಿದ್ದಾರೆ.

Also Read
ಇವರೇ ನೋಡಿ ಮಮಿತಾ ಬೈಜು ಸ್ಟಾರ್​ಡಮ್​ ಹಿಂದಿರುವ ಅಸಲಿ ಶಕ್ತಿ: ಹೆಸರೇಳಿ ಭಾವುಕರಾದ ಸ್ಟಾರ್​ ನಟಿ! Mamita Baiju
Parvathy Thiruvothu

ಆರಂಭದಲ್ಲಿ ಪಾರ್ವತಿಯವರ ದಿಟ್ಟತನ ಮತ್ತು ಸಿದ್ಧಾಂತಗಳನ್ನು ಟೀಕಿಸಿದ್ದ ಅದೇ ಮಲಯಾಳಂ ಪ್ರೇಕ್ಷಕರು ಮತ್ತು ಸಿನಿರಂಗ ಇಂದು ಅವರನ್ನು ಗೌರವದಿಂದ ನೋಡುತ್ತಿದೆ ಎಂದು ಅಲೆಪ್ಪಿ ಅಶ್ರಫ್ ಅಭಿಪ್ರಾಯಪಟ್ಟಿದ್ದಾರೆ. ಕೇವಲ ಸೌಂದರ್ಯ ಪ್ರದರ್ಶನಕ್ಕೆ ಸೀಮಿತವಾಗದೆ, ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸುವ ಮತ್ತು ತನ್ನ ನಿಲುವಿಗೆ ಬದ್ಧವಾಗಿರುವ ನಟಿಯರ ಮೇಲೆ ಸಿನಿರಂಗದ ದಬ್ಬಾಳಿಕೆ ಹೇಗೆಲ್ಲಾ ಇರುತ್ತದೆ ಎಂಬುದಕ್ಕೆ ಪಾರ್ವತಿ ಅವರೇ ಜೀವಂತ ಉದಾಹರಣೆಯಾಗಿದ್ದಾರೆ. ಆದರೆ, ಎಲ್ಲವನ್ನೂ ಏಕಾಂಗಿಯಾಗಿ ಎದುರಿಸಿ ಇಂದು ಪಾರ್ವತಿ ಅವರು ಪಡೆದಿರುವ ಗೆಲುವು ಅತ್ಯಂತ ಶಕ್ತಿಶಾಲಿ ಹಾಗೂ ಪ್ರಕಾಶಮಾನವಾಗಿದೆ ಎಂದು ಅಶ್ರಫ್ ಬಣ್ಣಿಸಿದ್ದಾರೆ.

ಒಟ್ಟಾರೆಯಾಗಿ, ಕಷ್ಟಗಳ ಮಳೆಯಲ್ಲೇ ಅರಳಿದ ಕಮಲದಂತೆ ಪಾರ್ವತಿ ತಿರುವೋತು ಅವರು ಮಲಯಾಳಂ ಚಲನಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಆರಂಭದಲ್ಲಿ ವಿರೋಧಿಸಿದವರೇ ಇಂದು ಅವರ ಪ್ರತಿಭೆ ಮತ್ತು ಧೈರ್ಯಕ್ಕೆ ತಲೆಬಾಗುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ನಟಿಯರ ಮೇಲಿನ ತಾರತಮ್ಯ ಮತ್ತು ಪುರುಷಪ್ರಧಾನ ವ್ಯವಸ್ಥೆಯ ದಬ್ಬಾಳಿಕೆಯ ವಿರುದ್ಧ ಹೋರಾಡಿ ಗೆದ್ದಿರುವ ಪಾರ್ವತಿ ಅವರ ಈ ಪಯಣವು ಮುಂದಿನ ಪೀಳಿಗೆಯ ಕಲಾವಿದರಿಗೆ, ವಿಶೇಷವಾಗಿ ಮಹಿಳೆಯರಿಗೆ ಎಂದಿಗೂ ದಾರಿದೀಪವಾಗಿ ಹಾಗೂ ದೊಡ್ಡ ಸ್ಪೂರ್ತಿಯಾಗಿ ಉಳಿಯಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net