

‘ಜೈಲರ್’ ಚಿತ್ರದ ಸಕ್ಸಸ್ ಬೆನ್ನಲ್ಲೇ ರಜಿನಿಕಾಂತ್ ಬೇರೆ ಚಿತ್ರಗಳತ್ತ ಗಮನ ಹರಿಸಿದ್ದಾರೆ. ಕೆಲ ತಿಂಗಳ ಹಿಂದೆ ರಜಿನಿ, ‘ಜೈ ಭೀಮ್’ ಖ್ಯಾತಿಯ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಕಾಂಬಿನೇಷನ್ ಚಿತ್ರ ಘೋಷಣೆಯಾಗಿತ್ತು. ತಾತ್ಕಾಲಿಕವಾಗಿ ಚಿತ್ರಕ್ಕೆ ‘ತಲೈವರ್ 170’ ಎಂದು ಶೀರ್ಷಿಕೆ ಇಡಲಾಗಿದ್ದು, ಕೆಲವೇ ದಿನಗಳಲ್ಲಿ ಟೈಟಲ್ ೋಷಣೆಯಾಗಲಿದೆ. ಅದರ ನಡುವೆಯೇ ಚಿತ್ರತಂಡ ಇತ್ತೀಚೆಗಷ್ಟೆ ಚಿತ್ರದ ತಾರಾಗಣ ರಿವೀಲ್ ಮಾಡಿದೆ.
ರಜಿನಿಕಾಂತ್ ಅವರ 170ನೇ ಚಿತ್ರದಲ್ಲಿ ಕೇರಳ ರಾಜ್ಯ ಪ್ರಶಸ್ತಿ ವಿಜೇತ ಮಲಯಾಳಂ ನಟಿ ಮಂಜು ವಾರಿಯರ್ ಹಾಗೂ ಕೆಲವು ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿರುವ ರಿತಿಕಾ ಸಿಂಗ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ಜತೆಗೆ ‘ಸರ್ಪಟ್ಟಾ ಪರಂಬರೈ’ ಚಿತ್ರದ ಮಾರಮ್ಮ ಖ್ಯಾತಿಯ ದುಷಾರಾ ವಿಜಯನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗಷ್ಟೆ ದುಷಾರಾ ರಜಿನಿ ಅಳಿಯ ನಟ ಧನುಷ್ ಅವರ 50ನೇ ಚಿತ್ರಕ್ಕೂ ಅಯ್ಕೆಯಾಗಿದ್ದರು. ಇನ್ನು ‘ಬಾಹುಬಲಿ’ ಚಿತ್ರದ ಭಲ್ಲಾಳದೇವ ರಾನಾ ದಗ್ಗುಬಾಟಿ ಕೂಡ ಚಿತ್ರತಂಡದಲ್ಲಿರಲಿದ್ದಾರೆ. ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತವಿರಲಿದೆ.
ಲಾಲ್ ಸಲಾಂ ಪೋಸ್ಟರ್ ರಿಲೀಸ್
ರಜಿನಿಕಾಂತ್ ನಟಿಸುತ್ತಿರುವ 169ನೇ ಸಿನಿಮಾ ‘ಲಾಲ್ ಸಲಾಂ’. ಈ ಚಿತ್ರಕ್ಕೆ ರಜಿನಿ ಪುತ್ರಿ ಐಶ್ವರ್ಯಾ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಇತ್ತೀಚೆಗಷ್ಟೆ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದ್ದು, ರಜಿನಿ ಮೊಯಿದ್ದೀನ್ ಬಾವಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.