

ಬೆಂಗಳೂರು: ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಚಿತ್ರಗಳ ಸಂಖ್ಯೆ ಬಹಳ ಕಡಿಮೆ ಎಂದೇ ಹೇಳಬಹುದು. ಆಗೊಂದು ಈಗೊಂದು ಚಿತ್ರ ಬಿಡುಗಡೆಯಾಗುವುದು ಬಿಟ್ಟರೆ, ಮಿಕ್ಕಂತೆ ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಚಿತ್ರಗಳ ದೊಡ್ಡ ಕೊರತೆ ಇದೆ. ಈಗ ಅಜಯ್ ಸರ್ಪೇಷ್ಕರ್ ಎನ್ನುವವರು 'ಮಂಡಲ' ಎಂಬ ಸೈನ್ಸ್ ಫಿಕ್ಷನ್ ಚಿತ್ರವನ್ನು ರೆಡಿ ಮಾಡಿಟ್ಟುಕೊಂಡು, ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.
ಮೂಲತಃ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಅಜಯ್ ಸರ್ಪೇಷ್ಕರ್, ಕೆಲಸಕ್ಕೆ ಗುಡ್ಬೈ ಹೇಳಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.
ತಮ್ಮ ಮೊದಲ ಚಿತ್ರದಲ್ಲೇ ಪ್ರತಿಭಾವಂತರ ದಂಡನ್ನೇ ಅವರು ಕಲೆಹಾಕಿದ್ದಾರೆ. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್ ಶ್ರೀನಿವಾಸ್, ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
2018ರಲ್ಲೇ ‘ಮಂಡಲ’ ಚಿತ್ರದ ಚಿತ್ರೀಕರಣ ಮುಗಿದಿತ್ತು. ಸೈನ್ಸ್ ಫಿಕ್ಷನ್ ಚಿತ್ರವಾದ್ದರಿಂದ ಗ್ರಾಫಿಕ್ ಕೆಲಸ ಬಹಳ ಇದ್ದ ಕಾರಣ, ಚಿತ್ರ ವಿಳಂಬವಾಗಿ ಮಾರ್ಚ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
'ಮಂಡಲ' ಚಿತ್ರವನ್ನು ಅಜಯ್ ಅವರೇ ನಿರ್ಮಿಸಿದ್ದು, ಚಿತ್ರಕ್ಕೆ ಜೆಸ್ಸಿ ಕ್ಲಿಂಟನ್ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣವಿದೆ.